ಯಡ್ಡಿ ನಾಯಕತ್ವದಲ್ಲಿ ಚುನಾವಣೆ : ಕತ್ತಿ ಝಳಪಿಸಿದ ಕತ್ತಿ

ಸದಾನಂದ ಗೌಡ ಕೂಡ ನಮ್ಮ ನಾಯಕರೆ. ಆದರೆ, ಮುಂದಿನ ಚುನಾವಣೆ ಮಾತ್ರ ಯಡಿಯೂರಪ್ಪನವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜದ ಬದಲಾಗಿ ಭಿನ್ನಮತದ ಧ್ವಜವನ್ನು ಆಕಾಶದಲ್ಲಿ ಹಾರಾಡಿಸಿದ್ದಾರೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ.
ಈ ಹೇಳಿಕೆಯಿಂದಾಗಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದೇಯಿದೆ, ಯಡಿಯೂರಪ್ಪ ಬಿಟ್ಟರೆ ಬೇರೆ ನಾಯಕತ್ವಕ್ಕೆ ಮನ್ನಣೆಯೇ ಇಲ್ಲ ಎಂಬ ಅಂಶ ಜಗಜ್ಜಾಹೀರಾಗಿದೆ. ಯಡಿಯೂರಪ್ಪನವರು ಜೈಲಿನಲ್ಲಿದ್ದರೂ ನಿಜವಾದ ನಾಯಕನಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.
ಅ.30ರಂದು ಅಡ್ವಾಣಿಯವರು ಸಾರ್ವಜನಿಕ ಸಭೆಯಲ್ಲಿ ಬೆಂಗಳೂರಿನಲ್ಲಿ ಭಾಗವಹಿಸಿದ್ದಾಗ ಯಡಿಯೂರಪ್ಪನವರೇ ತಮ್ಮ ನಾಯಕರೆಂದು ಎದೆತಟ್ಟಿ ಹೇಳುವ ಡಜನ್ ಶಾಸಕರು ಗೈರಾಗಿದ್ದರು. ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ನಿರಾಣಿ, ಕತ್ತಿ, ಸಿಸಿ ಪಾಟೀಲ್, ಬೊಮ್ಮಾಯಿ ಮುಂತಾದವರು ವರಿಷ್ಠರಿಗೇ ಸೆಡ್ಡು ಹೊಡೆದಿದ್ದರು.
ಮಂಗಳೂರು ಮತ್ತು ಉಡುಪಿಯಲ್ಲಿ ಅಡ್ವಾಣಿ ರಥಯಾತ್ರೆ ಚಲಿಸಿದಾಗಲೂ ಯಡಿಯೂರಪ್ಪ ಹಿಂಬಾಲಕರಾಗಿರುವ ಆಯಾ ಕ್ಷೇತ್ರದ ಶಾಸಕರು ಭಾಗವಹಿಸಿರಲಿಲ್ಲ. ಅತಿ ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿಯಲ್ಲಿಯೇ ಅಶಿಸ್ತು ತಾಂಡವವಾಡುತ್ತಿರುವುದು ಮತ್ತೆ ಸಾಬೀತಾಗಿದೆ.











Click it and Unblock the Notifications