ನಲ್ಮೆಯ ಕನ್ನಡದ ನಾಳೆಯ ಕುರಿತು ಚಿಂತಿಸೋ ವೇಳೆ

ಇದರ ನೇರ ಪರಿಣಾಮ ತಿಳಿಯಬೇಕೇ? ಸುಮ್ಮನೆ ಬೆಂಗಳೂರನ್ನು ಗಮನಿಸಿ. ಖಾಸಗಿ ಇಂಗ್ಲಿಷ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಷ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಮಿತಿ ಮೀರಿ ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ನಾಳೆ ಇದು ಇಡೀ ಕರ್ನಾಟಕವನ್ನು ವ್ಯಾಪಿಸಿದರೂ ಅಚ್ಚರಿಯಿಲ್ಲ. ಇಡೀ ಕರ್ನಾಟಕಕ್ಕೆ ಸಮಗ್ರವಾದ, ಅತ್ಯುತ್ತಮ ಗುಣಮಟ್ಟದ, ಎಲ್ಲ ಹಂತದ ಒಳ್ಳೆಯ ಕಲಿಕೆಯನ್ನು ಕನ್ನಡದಲ್ಲೇ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊರದೇ ಹೋದರೆ ಆಗುವ ಕೆಟ್ಟ ಬದಲಾವಣೆಗಳು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಗಳಾಗಲಿವೆ.
ಒಂದಿಷ್ಟು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು, ಮಾಣೇಕ್ ಶಾ ಮೈದಾನದಲ್ಲಿ ಒಂದು ಕಾರ್ಯಕ್ರಮ ಮಾಡಿ ಸಿಹಿ ತಿನ್ನುವುದು, ಆಮೇಲೆ ಕನ್ನಡ, ಕನ್ನಡಿಗರ ಉಳಿವಿಗೆ ತಾವೆಷ್ಟು ಬದ್ಧ ಎಂದು ಭಾಷಣ ಕೊರೆಯುವುದು, ಕಲೆ, ಸಾಹಿತ್ಯ, ಸಿನೆಮಾ ಅಂತ ಬೊಕ್ಕಸದಿಂದ ಒಂದಿಷ್ಟು ಹಣ ಕೊಡುವುದೇ ಕನ್ನಡದ ಕೆಲಸ ಅಂದುಕೊಂಡಿರುವ ಈ ಸರ್ಕಾರ ನಾಡಿನ ನಾಳೆಯನ್ನು ರೂಪಿಸಬೇಕಾದ ಕಲಿಕಾ ವ್ಯವಸ್ಥೆಗಳತ್ತ ಇದೇ ಕಡೆಗಣನೆ ಮುಂದುವರೆಸಿದರೆ ಕನ್ನಡ, ಕನ್ನಡಿಗನಿಗೆ ಉಳಿಗಾಲವಿಲ್ಲ.
ಕೊನೆ ಹನಿ: ಉದ್ಯಮಿ ಅಜೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ ಮೂಲಕ ಎಲ್ಲ ರೀತಿಯ ವ್ಯವಸ್ಥೆಯುಳ್ಳ ಎರಡೆರಡು ಶಾಲೆಯನ್ನು ಎಲ್ಲ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಈ ಶಾಲೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲೇ ಕಲಿಕಾ ವ್ಯವಸ್ಥೆ ರೂಪಿಸುವುದು ಮತ್ತು ಅದನ್ನು ರಾಜ್ಯದ ಬೋರ್ಡ್ ನೊಂದಿಗೆ ನೊಂದಾಯಿಸಿಕೊಳ್ಳುವ ಅತ್ಯಂತ ಸಂತೋಷದ ನಿಲುವು ಪ್ರಕಟಿಸಿದ್ದಾರೆ. ನಮ್ಮ ನಾರಾಯಣ ಮೂರ್ತಿ, ಕ್ಯಾ.ಗೋಪಿನಾಥ್ ಅವರು ಇದನ್ನು ಗಮನಿಸುತ್ತಿದ್ದಾರೆ ಅಂದುಕೊಳ್ಳುವೆ. ಇಂತಹ ಕ್ರಮಗಳು ಹೊಳಪು ಕಳೆದುಕೊಳ್ಳುತ್ತಿರುವ ತಾಯ್ನುಡಿ ಶಿಕ್ಷಣದತ್ತ ಎಲ್ಲರೂ ದೊಡ್ಡ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಲಿ ಆಗಲಾದರೂ ಸರ್ಕಾರಕ್ಕೆ ತನ್ನ ಹೊಣೆಗಾರಿಕೆ ನೆನಪಾಗುವುದಾ ನೋಡೊಣ.












Click it and Unblock the Notifications