ಮಡಿಕೇರಿ ದಸರಾ ಶೋಭಯಾತ್ರೆಗೆ ಕ್ಷಣಗಣನೆ...

ದಶಮಂಟಪಗಳ ಮೆರವಣಿಗೆಗೆ ಸಮಿತಿ ಸದಸ್ಯರು ಮಂಟಪಗಳನ್ನು ಸಿದ್ದಗೊಳಿಸುವಲ್ಲಿ ನಿರತರಾಗಿದ್ದು ರಾತ್ರಿ ಹತ್ತುಗಂಟೆ ವೇಳೆಗೆಲ್ಲಾ ದೇವಾಲಯಗಳಿಂದ ಮಂಟಪಗಳು ಹೊರಟು ರಾಜಮಾರ್ಗವನ್ನು ತಲುಪಲಿವೆ.
ಈ ಬಾರಿ ಮಡಿಕೇರಿ ದಸರಾ ವಿಕ್ಷಿಸಲು ಸುಮಾರು ಎರಡು ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿರುವುದರಿಂದ ಮಂಟಪಗಳು ಸಾಗುವ ಮಾರ್ಗದ ಎರಡು ಬದಿಗಳಲ್ಲಿ ಗ್ಯಾಲರಿ ನಿರ್ಮಾಣ ಹಾಗೂ ಸುಮಾರು 12 ಕಡೆಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯು ನಗರದಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು, ನಗರದೊಳಗೆ ಬರುವ ವಾಹನಗಳ ತಪಾಸಣೆಯನ್ನು ಮಾಡಲಾಗುತ್ತಿದೆ. ಅಲ್ಲದೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ದಶಮಂಟಪಗಳ ಶೋಭಾಯಾತ್ರೆ: ರಾತ್ರಿ ನಡೆಯಲಿರುವ ಶೋಭಾಯಾತ್ರೆಯಲ್ಲಿ ದಶದೇಗುಲಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀಕೋಟೆಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋದಂಡರಾಮ ಮಂದಿರ, ಶ್ರೀ ಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀ ಭಗವತಿ ಹಾಗೂ ಶ್ರೀ ಕೋಟೆಗಣಪತಿ ದೇವಾಲಯಗಳ ಮಂಟಪಗಳು ಪಾಲ್ಗೊಳ್ಳಲಿವೆ.
ರಾತ್ರಿ ಪೇಟೆ ಶ್ರೀರಾಮ ಮಂದಿರದ ಮಂಟಪ ಮಂಗಳವಾದ್ಯ ಹಾಗೂ ಕಳಶದೊಂದಿಗೆ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದ ಬಳಿಕ ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯಕ್ಕೆ ಹೋಗಿ ಅಲ್ಲಿಯೂ ಪೂಜೆಯನ್ನು ಸ್ವೀಕರಿಸಿ ಅಲ್ಲಿಂದ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಆಗಮಿಸಲಿದೆ.
ಅದೇ ಸಮಯಕ್ಕೆ ಕೋಟೆ ಮಾರಿಯಮ್ಮ ದೇವಾಲಯದ ಕರಗ ಕೂಡ ಅಲ್ಲಿಗೆ ಬರಲಿದೆ. ಬಳಿಕ ಪೇಟೆ ರಾಮಮಂದಿರದ ಕಳಶ ಪೂಜೆ ನಡೆದು ಎಲ್ಲಾ ಕರಗ ಹಾಗೂ ಮಂಟಪಗಳು ಮೆರವಣಿಗೆಯಲ್ಲಿ ಬನ್ನಿಕಡಿಯಲು ತೆರಳಲಿವೆ.
ಈ ಬಾರಿ ದಶಮಂಟಪಗಳು ಅದ್ಧೂರಿಯಾಗಿ ಮಂಟಪಗಳನ್ನು ನಿಮರ್ಿಸಿದ್ದು ಬಹುಮಾನಕ್ಕಾಗಿ ತೀವ್ರ ಪೈಪೋಟಿಗಿಳಿದಿವೆ. ನಗರದಾದ್ಯಂತ ದಸರಾ ಸಂಭ್ರಮ ಮನೆಮಾಡಿದ್ದು ಇಡೀ ನಗರ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿವೆ. ರಾತ್ರಿ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ರಸಮಂಜರಿ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications