ವರದಕ್ಷಿಣೆ ಕಿರುಕುಳ: ಮಹಿಳೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು

ವರದಕ್ಷಿಣೆಯಾಗಿ ಕಾರು ತರಲಿಲ್ಲ ಎಂದು ಮದುವೆಯಾಗಿ ಮನೆಗೆ ಬಂದಿದ್ದ ಗೃಹಲಕ್ಷ್ಮಿಯನ್ನು ಈ ದುರುಳರು ನಿತ್ಯಸುಮಂಗಲಿಯನ್ನಾಗಿಸಿದ್ದಾರೆ. ಅರ್ಥಾತ್ ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಹರಿಯಾಣಾ ಪೊಲೀಸರು ಇಡೀ ಕುಟುಂಬವನ್ನು ಕೃಷ್ಣನ ಜನ್ಮ ಸ್ಥಾನಕ್ಕೆ ತಳ್ಳಿ, ಕೃತಾರ್ಥರಾಗಿದ್ದಾರೆ.
ಬಾಧಿತ ಮಹಿಳೆ ಇಲ್ಲಿನ ಅಬೂಬ್ ಶಹರ ಗ್ರಾಮದವರು. ಇವರು ರಾಜಸ್ಥಾನದ ಪಿಲಿಬಂಗಾ ತಾಲೂಕಿನ ಯುವಕನನ್ನು ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ಯುವಕನ ಮನೆಯವರು ವರದಕ್ಷಿಣೆಗಾಗಿ ವರಾತ ತೆಗೆದಿದ್ದಾರೆ. ಅಬೂಬ್ ಶಹರದ ಮಹಿಳೆಯನ್ನು ಗೋಳುಹೊಯ್ಕೊಂಡಿದ್ದಾರೆ. ಕಾರು ತರಲೇ ಬೇಕೆಂದು ಹೊಡೆದೂಬಡಿದೂ ಮಾಡಿದ್ದಾರೆ.
ನೀವು ಏನೇ ಮಾಡಿದರೂ ದುಡ್ಡು ತರೋಷ್ಟು ಚೈತನ್ಯ ನನಗಾಗಲಿ ನನ್ನ ತವರಿಗಾಗಲಿ ಇಲ್ಲ ಎಂದು ಮಹಿಳೆ ನೊಂದು ನುಡಿದಿದ್ದಾಳೆ. ಸರಿ ಅನ್ಯ ಮಾರ್ಗ ಕಾಣದ ದುರುಳರು ಆಕೆಯನ್ನು ಜೈಪುರದ ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ಬಳಿಕ ಆ ಮನೆಗೆ ಒಬ್ಬೊಬ್ಬರಾಗಿ ಇತರೆ ಪುರುಷರನ್ನೂ ಕಳಿಸತೊಡಗಿದ್ದಾರೆ. ಈ ಮಧ್ಯೆ, ಪಾಪಿ ಗಂಡ ತನ್ನ ಹೆಂಡತಿಗೆ ಮತ್ತು ಬರಿಸುವ ಔಷಧಿಗಳನ್ನು ನೀಡಿದ್ದಾನೆ.
ಕೊನೆಗೂ ಅದ್ಹೇಗೋ ಮಹಿಳೆ ಮನೆಯಿಂದ ಹೊರಬಂದು ತನ್ನ ಪೋಷಕರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ.












Click it and Unblock the Notifications