ಬ್ರಹ್ಮಾವರದ ಅಥ್ಲೀಟ್ ಪೃಥ್ವಿ ಸಾವಿಗೆ ಪ್ರಿಯಕರ ಕಾರಣ

ಬ್ರಹ್ಮಾವರ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಉದಯೋನ್ಮುಖ ಕ್ರೀಡಾಪಟು ಪೃಥ್ವಿ ಆತ್ಮಹತ್ಯೆ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಅನ್ಯ ಕೋಮಿನ ಯುವಕನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಪೃಥ್ವಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಂಎಸ್ ಕಾಲೇಜಿನ ಮಹಿಳಾ ಹಾಸ್ಟೆಲ್ ರೂಮಿನಿಂದ ವಶಪಡಿಸಿಕೊಳ್ಳಲಾದ ಆಕೆಯ ಡೈರಿಯಲ್ಲಿ ಆತನ ಹೆಸರು ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಬ್ರಹ್ಮಾವರದ ಸರ್ಕಲ್ ಇನ್‌ಸ್ಪೆಕ್ಟರ್ ಜಿ. ಕೃಷ್ಣಮೂರ್ತಿ ತಿಳಿಸಿದರು.
ಬ್ರಹ್ಮಾವರದ ಆಕಾಶವಾಣಿ ನಿಲಯದ ಸಮೀಪ ವಾಸವಾಗಿರುವ ಈ ಯುವಕ, ಕಳೆದ ಒಂದೂವರೆ ವರ್ಷದಿಂದ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಯುವಕನನ್ನು ಬಂಧಿಸಿದ್ದೇವೆ. ಆತನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದೂ ಕೃಷ್ಣಮೂರ್ತಿ ತಿಳಿಸಿದರು.
ಆತ್ಮಹತ್ಯೆಗೆ ಮುನ್ನ ಆಕೆಯ ಮೊಬೈಲ್‌ಗೆ ಬಂದ ಕರೆಗಳು ಹಾಗೂ ಎಸ್‌ಎಂಎಸ್ ಆದಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಪೃಥ್ವಿ ಬರೆದ ಡೈರಿಯನ್ನು ಆಧಾರಿಸಿ ಆಕೆಯನ್ನು ಹಿಂಸಿಸುತ್ತಿದ್ದ ವ್ಯಕ್ತಿಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆದರೆ ಡೈರಿಯ ಮಧ್ಯದಲ್ಲಿ ಅನೇಕ ಹಾಳೆಗಳು ಹರಿದು ತೆಗೆದು ಸ್ಥಿತಿಯಲ್ಲಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೃಥ್ವಿ ಸಂಬಂಧಿಕರು ನೀಡಿದ ದೂರಿನಲ್ಲಿ ತರಬೇತುದಾರರು ಸೇರಿದಂತೆ ಅನೇಕರ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ.
ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ: ಪೃಥ್ವಿಯ ಮೃತದೇಹವನ್ನು ಬುಧವಾರ ಆಕೆಯ ಹುಟ್ಟೂರಾದ ಅಂಪಾರು ಸಮೀಪದ ಗೊರಟೆಗೆ ಕೊಂಡೊಯ್ದು ಸಂಜೆಯ ವೇಳೆ ಮನೆಯ ಸಮೀಪ ಅಂತ್ಯ ಸಂಸ್ಕಾರ ನಡೆಸಲಾಯಿತು. ಆಕೆಯ ತಂದೆ ಶೇಖರ ಪೂಜಾರಿ ಅಂಪಾರಿನಲ್ಲಿ ಗೂಡಂಗಡಿಯೊಂದನ್ನು ಹೊಂದಿದ್ದರೆ ತಾಯಿ ಸುಶೀಲ ಗೃಹಿಣಿ.
ಪೃಥ್ವಿಯವರ ತಂಗಿ ಹಾಗೂ ಸಹೋದರ ಇಬ್ಬರೂ ಕ್ರೀಡಾಪಟುಗಳೇ. ತಂಗಿ ಪವಿತ್ರಾ ಅಂಪಾರು ಸಂಜಯಗಾಂಧಿ ಪ್ರೌಢ ಶಾಲೆಯ ಎಂಟನೆ ತರಗತಿ ವಿದ್ಯಾರ್ಥಿನಿಯಾಗಿದ್ದರೆ, ಸಹೋದರ ಪ್ರದೀಪ್ ಬೆಂಗಳೂರಿನ ವಿವಿ ಪುರಂ ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ.












Click it and Unblock the Notifications