ಲೋಕಾಯುಕ್ತ ಸ್ಥಾನ ಬೇಡವೆನ್ನುತ್ತಿರುವ ನ್ಯಾಯ ಮೂರ್ತಿಗಳು

ಇನ್ನೇನು ಮತ್ತೆ. ಆ ಪಾಟಿ ಭ್ರಷ್ಟಾಚಾರ ಇದೆ ಕರ್ನಾಟಕದಲ್ಲಿ. ಮಾಜಿ, ಹಾಲಿ ಮುಖ್ಯಮಂತ್ರಿಗಳಷ್ಟೇ ಅಲ್ಲ. ಮಾಜಿ, ಹಾಲಿ ಮಂತ್ರಿಗಳು ಅಂತಷ್ಟೇ ಅಲ್ಲ. ಯಾವುದೋ ಅಡ್ಡಕಸುಬಿ ರಾಜಕಾರಣಿ ಅಂಥಲ್ಲ. ಘನಂದಾರಿ ರಾಜಕಾರಣಿಗಳ ಹಿಂಡೇ ನಾಮುಂದು ತಾಮುಂದು ಎಂದು ಪರಪ್ಪನ ಅಗ್ರಹಾರದತ್ತ ಓಟ ಕೀಳುತ್ತಿದೆ. ಅಂಥಾದ್ದರಲ್ಲಿ...
ರಾಜಕಾರಣಿಗಳು ಒತ್ತಟ್ಟಿಗರಲಿ, ಅಧಿಕಾರಶಾಹಿಯಾದರೂ ಇಲ್ಲಿ ನಿಯತ್ತಾಗಿ ಕೆಲಸ ಮಾಡುತ್ತಿದೆಯಾ ಎಂದರೆ ಶಿವ ಶಿವಾ! ಆ ಮಾತು ಕೇಳಲೇಬೇಡಿ. ಅದು ಗಣಿಗಾರಿಕೆಯೇ ಆಗಿರಲಿ, ಸೂಳೆಗಾರಿಕೆಯೇ ಆಗಿರಲಿ ತಲೆಹಿಡುಕ ಅಧಿಕಾರಶಾಹಿ ಭ್ರಷ್ಟರನ್ನು ಕಾಯಲು ಸ್ವತಃ ಭ್ರಷ್ಟತೆಯ ಶಿಖರ ಹತ್ತಿ ಕುಳಿತಿದೆ. ಇಂತಹ ಭ್ರಷ್ಟ ರಾಜ್ಯವೊಂದರಲ್ಲಿ ತಾವು ಲೋಕಾಯುಕ್ತರಾಗಿ ಕಾರ್ಯನಿರ್ವಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ಅನೇಕ (ನಿವೃತ್ತ) ನ್ಯಾಯಮೂರ್ತಿಗಳು ಆ ಹುದ್ದೆ ಬೇಡ-ಬೇಡ ಎನ್ನುತ್ತಿರಬಹುದು ಎಂಬುದು ನಿಮ್ಮ ಎಣಿಕೆಯಾಗಿದ್ದರೆ... ಆಮ್ ಸಾರಿ.
ಈಗೀಗ ಮಾಧ್ಯಮಗಳು (ಅದರಲ್ಲೂ ಭ್ರಷ್ಟಾಚಾರ ಮಿತಿಮೀರಿದೆ ಎಂಬುದು ಬೇರೆ ಮಾತು) ಮತ್ತು ಅದಕ್ಕಿಂತ ಹೆಚ್ಚಾಗಿ ಜಾಗೃತ ಸಮಾಜ ಭ್ರಷ್ಟರತ್ತ ಮೈಯೆಲ್ಲ ಕಣ್ಣಾಗಿ ಕಾಯತೊಡಗಿದೆ. ಇದರ ಜತೆಗೆ ಮಾಹಿತಿ ಹಕ್ಕು ಎಂಬ ಅಸ್ತ್ರವೂ ಸಿಕ್ಕಿಬಿಟ್ಟಿದೆ. ಇದೊಂದು ರೀತಿ (ಆರ್ ಟಿಐ) ಕೋಲು ಕೊಟ್ಟು ಹೊಡೆಸಿಕೊಂಡಂತಾಗಿದೆ ರಾಜಕಾರಣಿಗಳಿಗೆ. ಇನ್ನು ಅಣ್ಣಾ ಅವರ ಜನ ಲೋಕಪಾಲ ಕಾಯಿದೆ ಜಾರಿಗೆ ಬಂದರಂತೂ ಜನ ಜಾಗೃತಿ ಹೆಚ್ಚಾಗಿ, ಭ್ರಷ್ಟಾಚಾರಕ್ಕೆ ಖಂಡಿತ ಕಡಿವಾಣ ಬೀಳಲಿದೆ ಎಂಬ ಆಶಾಭಾವವೂ ಈ ಸಂದರ್ಭದಲ್ಲಿ ಮೊಳೆಯುತ್ತಿದೆ.
ಇಂತಹ ದುರ್ಭರ ಪರಿಸ್ಥಿತಿಯಲ್ಲಿ ನಾವು ಲೋಕಾಯುಕ್ತ ಸ್ಥಾನದಲ್ಲಿ ಕುಳಿತುಕೊಳ್ಳುವುದು. ಆ ಮೇಲೆ ನಮ್ಮ ಭೂತವನ್ನು ಯಾವನೋ ಕೆದಕುವುದು. ಇಲ್ಲ ಸಲ್ಲದ ಅಥವಾ ನಿಜವೂ ಆಗಿರಬಹುದಾದ ಹಳೆಯ ಪ್ರಕರಣಗಳನ್ನು ಬಯಲಿಗೆಳೆಯುವುದು. ಕೊನೆಗೆ, ತೆಪ್ಪಗೆ ಮನೆಗೆ ಹೋಗಿ ಎನ್ನುವುದು ಯಾಕೆ ಬೇಕು? ಸುಮ್ಮನೆ ಇರಲಾರದೆ ಇರುವೆ ಬಿಟ್ಕೊಂಡ್ರು ಅಂಥ.
ನಮ್ಮದೂ ಒಂದು ಜೀವಮಾನದಾಸೆ ಅಂತ ಇರುತ್ತೆ. ಏನೋ ಸ್ವಲ್ಪ ಹೆಚ್ಚು ಕಮ್ಮಿ ಮಾಡಿ ಒಂದು ಸೈಟೋ, ಮತ್ತೊಂದು ಎಡವಟ್ಟೋ ಮಾಡಿಕೊಂಡಿರುತ್ತೇವೆ. ಅದನ್ನೇ ದೊಡ್ಡದು ಮಾಡಿ, ಯು ಕೆನ್ ಗೋ ಅಂದರೆ ಯಾಕೆ ಬೇಕು, ಆ ಉಸಾಬರಿ.
ಅದಕ್ಕೆ ಯಾರಿಗೆ ಬೇಕು, ನಿಮ್ಮ ಲೋಕಾಯುಕ್ತ ಪದವಿ. ಅದೆಲ್ಲ ನ್ಯಾ.ವೆಂಕಟಾಚಲ, ನ್ಯಾ.ಸಂತೋಷ್ ಹೆಗ್ಡೆ ಅವರ ಕಾಲಕ್ಕೇ ಹೋಯಿತು ಎನ್ನುತ್ತಿದ್ದಾರಂತೆ!











Click it and Unblock the Notifications