ಮೊಬೈಲುಗಳ ಕದ್ದು ಜೈಲುಪಾಲಾದ ಚೆನ್ನೈ ವೈದ್ಯ

31 ವರ್ಷದ ಮೂಳೆ ವೈದ್ಯ ಓಂಪ್ರಕಾಶ್ ನಾರಾಯಣ್ ಮೂರು ಹೈ-ಎಂಡ್ ಮೊಬೈಲುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಲ್ಲಿನ ಟ್ರಿಪ್ಲಿಕೇನ್ ಕಾಲನಿಯಲ್ಲಿ ಡಾ. ಓಂಪ್ರಕಾಶನ ಖಾಸಗಿ ಕ್ಲಿನಿಕ್ ನಿಂದ ಪೊಲೀಸರು ಕಳ್ಳತನವಾಗಿದ್ದ ಭಾರಿ ಮೌಲ್ಯದ ಮೂರೂ ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದ ಸಮೀಪವಿರುವ ತಂಬರಂ ಗ್ಲೋಬಲ್ ಆಸ್ಪತ್ರೆಯಿಂದ ಡಾ. ಓಂಪ್ರಕಾಶ್ ಮೊಬೈಲ್ ಕದಿಯುವ ಚಟ ಬೆಳೆಸಿಕೊಂಡಿದ್ದ. ಇತ್ತೀಚೆಗಷ್ಟೇ 85,000 ರುಪಾಯಿ ತಿಂಗಳ ಪಗಾರದಲ್ಲಿ ಈ ವೈದ್ಯ ಮಹಾಶಯ ಈ ಆಸ್ಪತ್ರೆ ಸೇರಿಕೊಂಡಿದ್ದ. ಶ್ರೀಮಂತ ಮನೆತನದ ಡಾ. ಓಂಪ್ರಕಾಶ್ ಇತ್ತೀಚೆಗೆ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.
ಪತ್ತೆಯಾಗಿದ್ದು ಹೇಗೆ!?: ಸಿಸಿಟಿವಿ ಕ್ಯಾಮರಾಗಳು ಇತ್ತೀಚಿನ ದಿನಗಳಲ್ಲಿ ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದು, ಪೊಲೀಸರ ಕೆಲಸವನ್ನು ಹಗುರಗೊಳಿಸಿದೆ. ಇಲ್ಲಿಯೂ ಅದೇ ಆಗಿದೆ. 'ಆರೋಪಿ ವೈದ್ಯ ಓಂಪ್ರಕಾಶನಿಗೆ ವಿಡಿಯೋ ತುಣುಕು ತೋರಿಸಿದಾಗ ಬೆಚ್ಚಿಬಿದ್ದ. ಆದರೆ ಕೊನೆಗೂ ತಪ್ಪೊಪ್ಪಿಕೊಂಡ' ಎಂದು ಇನ್ಸ್‌ಪೆಕ್ಟರ್ ವಿ. ವಿಮಲನಾಥನ್ ಹೇಳಿದ್ದಾರೆ. ಡಾ. ಓಂಪ್ರಕಾಶ್ ಗೆ ಪ್ರಕರಣದಲ್ಲಿ ಮೂರು ತಿಂಗಳ ಸಾದಾ ಜೈಲುಶಿಕ್ಷೆಯಾಗಬಹುದು.












Click it and Unblock the Notifications