ರೆಡ್ಡಿ ಲಾಕರ್ ಗಳಲ್ಲಿ ಏನೇನು ಅಡಗಿದೆಯೊ?

ಬೆಳಗ್ಗೆ 9 ಗಂಟೆ ಸುಮಾರಿಗೆ ಪಿಡಿ ಹಳ್ಳಿ ಪೊಲೀಸ್ ಠಾಣೆಯಿಂದ ಬಳ್ಳಾರಿಯ ಆಕ್ಸಿಸ್ ಬ್ಯಾಂಕ್‌ಗೆ ಶ್ರೀನಿವಾಸ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ಕರೆತಂದರು. ಕೂಡಲೇ ಬ್ಯಾಂಕ್‌ನ ಮುಖ್ಯದ್ವಾರದ ಬೀಗವನ್ನು ತೆರೆದಿದ್ದ ಬ್ಯಾಂಕ್‌ನ ಹಿರಿಯ ಅಧಿಕಾರಿ ಕಿಶೋರ್, ಸಿಬಿಐ ಅವರ ಮಾರ್ಗದರ್ಶನಲ್ಲಿ ಸ್ಟ್ರಾಂಗ್‌ರೂಂ ಮತ್ತು ವಿವಿಧ ಖಾತೆಗಳ ಮಾಹಿತಿಯನ್ನು ನೀಡಲು ಸನ್ನದ್ಧರಾದರು.
ಶ್ರೀನಿವಾಸರೆಡ್ಡಿ ಅವರ ಹೆಸರಲ್ಲಿ 5 ಲಾಕರ್‌ಗಳು ಈ ಬ್ಯಾಂಕ್‌ನಲ್ಲಿವೆ. ಬೀಗಗಳು ಕಳೆದಿವೆ ಎನ್ನಲಾಗಿದ್ದು, ಲಾಕರ್‌ಗಳನ್ನು ತೆರೆಯಲು ಬೀದಿ ಬದಿಯ ಬೀಗದಕೈ ತೆರೆಯುವವರನ್ನು ಕರೆತರಲಾಗಿತ್ತು. ಓರ್ವ ಕೇವಲ 3 ಲಾಕರ್‌ಗಳನ್ನು ತೆರೆಯುವಲ್ಲಿ ಯಶಸ್ವಿಯಾದ. ಮತ್ತೋರ್ವ ಬಂದ ದಾರಿಗೆ ಸುಂಕವೇ ಇಲ್ಲ ಎನ್ನುವಂತೆ ಬ್ಯಾಂಕ್ ಒಳ ಹೋಗಲು ಭಯಭೀತನಾಗಿ ಹಿಂದಿರುಗಿದ.
ಕಾಲಕಾಲಕ್ಕೆ ತಿಂಡಿ, ಕೂಲ್‌ಡ್ರಿಂಕ್ : ಬೆಳಗ್ಗೆ 10.30ರಿಂದ ಪೊಲೀಸ್ ತಪಾಸಣೆಯ ನಂತರವೇ ಬ್ಯಾಂಕ್‌ನ ಗ್ರಾಹಕರನ್ನು ಬ್ಯಾಂಕ್‌ನ ಒಳಗಡೆ ಕಳುಹಿಸಿ ಬ್ಯಾಂಕ್‌ನ ವ್ಯವಹಾರಗಳು ಎಂದಿನಂತೆ ನಡೆಯಲು ಅವಕಾಶ ಕಲ್ಪಿಸಿದ ಸಿಬಿಐ ಅಧಿಕಾರಿಗಳು, ಬಿ.ವಿ. ಶ್ರೀನಿವಾಸರೆಡ್ಡಿಗೆ ಕಾಲಕಾಲಕ್ಕೆ ತಿಂಡಿ, ಕೂಲ್‌ಡ್ರಿಂಕ್‌ಗಳನ್ನು ನೀಡುತ್ತಿದ್ದರು. ರೆಡ್ಡಿಯು ಕೂಡ ಸಿಬಿಐನ ತನಿಖೆಗೆ ಸಕಾರಾತ್ಮಕವಾಗಿಯೇ ಸಹಜವಾಗಿಯೇ ಸ್ಪಂದಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಸಣ್ಣ ಫಕ್ಕೀರಪ್ಪ ಅವರು ಈ ಬ್ಯಾಂಕ್ ಮುಂದಿನ ರಸ್ತೆಯಲ್ಲೇ ಒಂದೆರೆಡು ಸುತ್ತುಹಾಕುವ ಮೂಲಕ ತನ್ನ ಕುತೂಹಲವನ್ನು ತೋರಿದ್ದರು. ಬ್ಯಾಂಕ್‌ನ ಸುತ್ತಲೂ ಜಮಾವಣೆಗೊಂಡಿದ್ದ ಓಎಂಸಿ ಸಿಬ್ಬಂದಿ ತಮ್ಮದೇ ಆದ ಸಂಕೇತಾಕ್ಷರಗಳ ಮೂಲಕ ಸಂದೇಶಗಳನ್ನು ರವಾನೆ ಮಾಡುತ್ತ ಕ್ರಿಯಾಶೀಲರಾಗಿದ್ದರು. ಆದರೆ, ಸ್ಥಳೀಯ ಪೊಲೀಸರು ಬ್ಯಾಂಕ್‌ನ ಗ್ರಾಹಕರ ಮೇಲೆ ಗಮನ ಕೇಂದ್ರೀಕರಿಸಿದ್ದರು.












Click it and Unblock the Notifications