ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ಉಗ್ರಾಣ ತೆರೆಯಲು ಅನುಮತಿ ಕೋರಿದ ಸುಪ್ರೀಂ ಸಮಿತಿ

By Srinath
|
Google Oneindia Kannada News

padmanabha-supreme-committee-asks-open-bvault
ತಿರುವನಂತಪುರ, ಸೆ. 15: ಇಲ್ಲಿನ ಪದ್ಮನಾಭ ದೇಗುಲ ನೆಲಮಾಳಿಗೆಯಲ್ಲಿರುವ 'ಬಿ" ಉಗ್ರಾಣದ ದ್ವಾರ ತೆಗೆದು ಅಲ್ಲಿರುವ ಸಂಪತ್ತನ್ನು ಪಟ್ಟಿ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನೇಮಿಸಿರುವ ಸಪ್ತ ಸದಸ್ಯ ಸಮಿತಿ ಸುಪ್ರೀಂ ಕೋರ್ಟ್‌ಗೆ ಕೋರಿದೆ. ಇದರಿಂದ ವಿವಾದದ ಕೇಂದ್ರವಾಗಿರುವ ಈ ಉಗ್ರಾಣ ತೆರೆಯುವುದಕ್ಕೆ ಇದ್ದ ಅಡ್ಡಿ, ಆತಂಕಕಗಳು ನಿವಾರಣೆಯಾಗಿವೆ ಎನ್ನಬಹುದು.

'ಬಿ' ಉಗ್ರಾಣದ ಸ್ಥಿತಿ ಮತ್ತು ಅದರಲ್ಲಿರುವ ಸಂಪತ್ತಿನ ಮೌಲ್ಯವನ್ನು ತಿಳಿದುಕೊಳ್ಳುವ ಸಲುವಾಗಿ ಈ ಕೊಠಡಿಯನ್ನು ತೆರೆಯುವುದು ಅಗತ್ಯ. ಆದ್ದರಿಂದ ಉಗ್ರಾಣವನ್ನು ತೆರೆಯಬೇಕೆಂದು ಸಮಿತಿ ನ್ಯಾಯಾಲಯಕ್ಕೆ ಹೇಳಿದೆ.

ಅಂತೆಯೇ ಅನಂತನ ಸಂಪತ್ತಿಗೆ ರಕ್ಷಣೆ ಕೊಡಲು ಕೂಡ ಕೊಠಡಿಯಲ್ಲಿರುವ ಸಂಪತ್ತಿನ ಮೌಲ್ಯ ನಿರ್ಣಯಿಸುವ ಅಗತ್ಯವಿದೆ ಎಂದು ನ್ಯಾಶನಲ್‌ ಮ್ಯೂಸಿಯಂನ ನಿರ್ದೇಶಕ ಸಿ. ವಿ. ಆನಂದ ಬೋಸ್‌ ನೇತೃತ್ವದ ಸಮಿತಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಮಧ್ಯಾಂತರ ವರದಿಯಲ್ಲಿ ಪ್ರತಿಪಾದಿಸಿದೆ. ಈ ಸಮಿತಿ ಅಂತಿಮ ವರದಿಯನ್ನು ಮುಂಬರುವ ಫೆಬ್ರವರಿಯಲ್ಲಿ ಸಲ್ಲಿಸಲಿದೆ.

ರಾಜಮನೆತನದವರು ಇಟ್ಟ ಅಷ್ಟಮಂಗಲ ಪ್ರಶ್ನೆ ಅನಂತನ ಸಂಪತ್ತಿನ ಮೌಲ್ಯಮಾಪನ ಮಾಡುವುದನ್ನು ವಿರೋಧಿಸಿದ್ದರೂ ತಾವು ಮೌಲ್ಯಮಾಪನ ಪ್ರಕ್ರಿಯೆಯನ್ನು ಮುಂದುವರಿಸಲಿದ್ದೇವೆ. ಪ್ರಸ್ತುತ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳಿಗೆ ಸಾಕಷ್ಟು ಭದ್ರತೆಯಿಲ್ಲ.

ಈಗಿನ ಪರಿಸ್ಥಿತಿಯಲ್ಲಿ ಕಳ್ಳತನವಾಗುವ ಸಾಧ್ಯತೆಯಿದೆ. ಸಂಪತ್ತಿನ ಭದ್ರತೆಯ ಹೊಣೆಯನ್ನು ಸಿಆರ್ ಪಿಎಫ್ ಗೆ ವಹಿಸಬೇಕು ಹಾಗೂ ದೇಗುಲದ ಸುತ್ತಮುತ್ತಲಿರುವ ರಾಜಕೀಯ ಪಕ್ಷಗಳ ಕಚೇರಿಗಳು, ಅಂಗಡಿಗಳು, ಹೊಟೇಲುಗಳನ್ನು ತೆರವುಗೊಳಿಸಬೇಕು. ದೇವಸ್ಥಾನದ ಸಮೀಪ ವಾಹನ ಪಾರ್ಕಿಂಗ್‌ ಮಾಡಲು ನಿರ್ಬಂಧ ಹೇರಬೇಕು.

ದೇಗುಲದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಪೊಲೀಸರು ಸೂಕ್ತ ತರಬೇತಿ ನೀಡಿ ಎಲ್ಲ ಸೆಕ್ಯೂರಿಟಿ ಗಾರ್ಡ್‌ಗಳನ್ನು ತಪಾಸಣೆಗೊಳಪಡಿಸಬೇಕು ಹಾಗೂ ದೇಗುಲದ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಸಮಿತಿ ಸಲಹೆ ಮಾಡಿದೆ.

ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದನ್ನು ಈಗಾಗಲೇ ತೆರೆಯಲಾಗಿದ್ದು, ಅವುಗಳಲ್ಲಿ 1 ಲಕ್ಷ ಕೋ. ರೂ.ಗೂ ಮಿಕ್ಕಿದ ಸಂಪತ್ತು ಪತ್ತೆಯಾಗಿದೆ. ಈ ಸಂಪತ್ತಿನ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಐವರ ಸಮಿತಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಯ ಉಸ್ತುವಾರಿಗಾಗಿ ಇಬ್ಬರ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

English summary
Kerala Hindu Temple Padmanabhaswamy Treasure- The Seven members Committee appointed by Supreme Court has asked the Court to permit to open B vault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X