ಜಾಮೀನು: ಜನಾರ್ದನ ರೆಡ್ಡಿಗೆ ಇಂದು ನಿರ್ಣಾಯಕ ದಿನ

ಇಲ್ಲಿನ ಚಂಚಲಗುಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ವಿ. ಶ್ರೀನಿವಾಸ್ ರೆಡ್ಡಿ ಅವರ ಜಾಮೀನು ಅರ್ಜಿಯ ಆದೇಶವನ್ನು ವಿಶೇಷ ಸಿಬಿಐ ನ್ಯಾಯಾಲಯ ಇಂದಿಗೆ (ಮಂಗಳವಾರ) ಕಾಯ್ದಿರಿಸಿದೆ. ಹಾಗೆಯೇ ಹೆಚ್ಚಿನ ವಿಚಾರಣೆಗಾಗಿ ರೆಡ್ಡಿದ್ವಯರನ್ನು ತಮ್ಮ ವಶಕ್ಕೆ ಕೊಡಬೇಕು ಎನ್ನುವ ಸಿಬಿಐ ಅರ್ಜಿಯ ತೀರ್ಪನ್ನೂ ಮಂಗಳವಾರ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.
ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಯಲ್ಲಿ ನ್ಯಾಯಾಧೀಶರು ತಮ್ಮ ಈ ನಿರ್ಧಾರಗಳನ್ನು ತಿಳಿಸಿದರು. ಇದರಿಂದಾಗಿ ಜಾಮೀನು ದೊರೆಯಬಹುದು ಎಂದು ನಿರೀಕ್ಷಿಸಿದ್ದ ರೆಡ್ಡಿಗಳಿಗೆ ಹಾಗೂ ಇಬ್ಬರನ್ನೂ ತಮ್ಮ ವಶಕ್ಕೆ ನೀಡಬಹುದು ಎನ್ನುವ ಸಿಬಿಐಗೆ ಭಾರೀ ನಿರಾಸೆಯಾಯಿತು.
ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಿಬಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ಟಂಕ ಅವರು, ರೆಡ್ಡಿ ದ್ವಯರು ಬಳ್ಳಾರಿ ಮತ್ತು ಆಂಧ್ರ ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಜಾಮೀನು ನೀಡಬಾರದು ಎಂದು ಹೇಳಿದರು. ಜನಾರ್ದನ ರೆಡ್ಡಿ ಪರ ಹಿರಿಯ ವಕೀಲರಾದ ಯು.ಯು.ಲಲಿತ್, ಬೆಂಗಳೂರಿನ ಸಿ.ವಿ. ನಾಗೇಶ್ ವಾದ ಮಂಡಿಸಿದರು.












Click it and Unblock the Notifications