ಸದಾನಂದ ಗೌಡ ದಿನಗೂಲಿ ಮುಖ್ಯಮಂತ್ರಿ: ಎಚ್‌ಡಿಕೆ ಲೇವಡಿ

ಏನಿಲ್ಲ. ತಮ್ಮ ನೆತ್ತಿ ಮೇಲೆ ಮೆತ್ತಿಕೊಂಡಿದ್ದ ಅಧಿಕಾರ ದುರುಪಯೋಗದ ಆರೋಪದಿಂದ ತಣ್ಣಗಾಗಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗಳು ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ದಿನಗೂಲಿ ಮುಖ್ಯಮಂತ್ರಿ ಎಂದು ಎಚ್‌ಡಿಕೆ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮೊದಲ ಬಾರಿಗೆ ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧ ಕಿಡಿ ಕಾರಿದ್ದಾರೆ.
ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿಯಲ್ಲ. ಅವರು ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವಂತಿಲ್ಲ. ಇದಕ್ಕೆ ಬಿಜೆಪಿ ಸರಕಾರದ ಆಡಳಿತವೇ ಸಾಕ್ಷಿ ಎಂದರು. ರಾಜ್ಯದಲ್ಲಿ ನಾಲ್ಕು ಸರಕಾರಗಳು ಆಡಳಿತ ನಡೆಸುತ್ತಿವೆ. ಸದಾನಂದ ಗೌಡ ಈ ಸರಕಾರದ ದಿನಗೂಲಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಅನಂತ ಕುಮಾರ್, ಸಚಿವ ಜಗದೀಶ್ ಶೆಟ್ಟರ್ ಹಾಗೂ ಸದಾನಂದ ಗೌಡ ಆಡಳಿತ ನಡೆಸುತ್ತಿದ್ದಾರೆ. ಆದರೆ ಸದಾನಂದ ಗೌಡ ಈ ನಾಯಕರ ಕೈಗೊಂಬೆಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಕಳೆದ ಕೆಲವು ದಿನಗಳಿಂದ ತಾನು ವೌನಕ್ಕೆ ಶರಣಾದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರೆಲ್ಲರಿಗೂ ಸದ್ಯದಲ್ಲಿಯೇ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಮಾಡುತ್ತೇನೆ ಎಂದು ಹೇಳಿರುವ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ, ಮೊದಲು ಕರ್ನಾಟದ ಆಡಳಿತದ ಕಡೆ ಗಮನಕೊಟ್ಟು ಸರಿ ದಾರಿಗೆ ತರಲಿ ಎಂದರು. ಕೊಪ್ಪಳದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪ್ರದೀಪ್ ಗೌಡ ಪಾಟೀಲ್ ಪರ ನಾಳೆಯಿಂದ ಚುನಾವಣೆ ಪ್ರಚಾರ ನಡೆಸಲಿದ್ದು, ಬಳಿಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮತ್ತೆ ಚಾಲನೆ ನೀಡಲಾಗುವುದು ಎಂದರು.












Click it and Unblock the Notifications