ಮಿಸ್ ಕಾಲ್ ಪ್ರೀತಿ: ಕೊಲೆಯಾದಳು ಯುವತಿ

ಆ ನಂಬರಿನಿಂದ ಕೆಲವು ಸಮಯದ ನಂತರ ಮತ್ತೆ ಕರೆ ಬರುತ್ತದೆ. ಇವಳು ರಿಸಿವ್ ಮಾಡುತ್ತಾಳೆ. ಸ್ನೇಹ ಬೆಳೆಯುತ್ತದೆ. ಯಾರೋ, ಏನೋ, ಗುರುತು ಪರಿಚಯವಿಲ್ಲದ ನಡುವೆ ಪ್ರೀತಿ ನಾಟಕ ಮುಂದುವರೆಯುತ್ತದೆ. ಅವನ ಪ್ರೀತಿ ಮಾತಿಗೆ ಅವಳು ಕರಗುತ್ತಾಳೆ. ಅವನೊಳಗೆ ಇರುವ ವಂಚಕ ಜಾಗೃತನಾಗುತ್ತಾನೆ.
ಹಲವು ಬಾರಿ ಭೇಟಿಯಾಗುತ್ತಾರೆ. ಒಂದು ದಿನ ಅರಣ್ಯ ಪ್ರದೇಶವೊಂದರಲ್ಲಿ ಆಕೆಯ ಹೆಣಪತ್ತೆಯಾಗುತ್ತದೆ. ಫೋನ್ ಕರೆಯ ಜಾಡು ಹಿಡಿದ ಪೊಲೀಸರು ಸರಗಳ್ಳನೊಬ್ಬನನ್ನು ಬಂಧಿಸುತ್ತಾರೆ. ಸಭ್ಯ ಕುಟುಂಬದಿಂದ ಬಂದ ಯುವತಿಯೊಬ್ಬಳು ಸರಗಳ್ಳನ ಪಾಶಕ್ಕೆ ಸಿಲುಕಿ ಸಾವನ್ನಪ್ಪುತ್ತಾಳೆ.
ಮುಂಬೈನ ಕುರ್ಲಾ ಎಂಬಲ್ಲಿ ಇಂತಹ ಘಟನೆ ನಡೆದಿದೆ. ವಿಧಾನ್ ಭವನ್ ಉದ್ಯೋಗಿಯಾಗಿರುವ ಫಾರಹಾ ಫರಿದ್ ಲೋಕಪಾಲಿ ಎಂಬಾಕೆಗೆ 25ರ ವಯಸ್ಸು. ಅಪರಿಚಿತ ನಂಬರಿನಿಂದ ಬಂದ ಮಿಸ್ ಕಾಲ್ ಸ್ನೇಹ, ಪ್ರೀತಿಗೆ ಸಿಲುಕುತ್ತದೆ. ಆಕೆ ಅಪರಿಚಿತ ಅಶ್ರಫ್ ಆಲಿ ಶೇಖ್ ನನ್ನು ಪ್ರೀತಿಸತೊಡಗುತ್ತಾಳೆ. ಆತನು ಪ್ರೀತಿಯ ನಾಟಕವಾಡುತ್ತಾನೆ.
"ತನ್ನ ಪೋಷಕರಲ್ಲಿ ಸ್ನೇಹಿತೆ ಸೀಮಾಳ ಮನೆಗೆ ಹೋಗುತ್ತೇನೆ ಎಂದು ಮನೆಬಿಟ್ಟಿದ್ದಳು. ಆದರೆ ಎಷ್ಟು ದಿನ ಕಳೆದರೂ ಆಕೆ ವಾಪಸ್ ಆಗಿರಲಿಲ್ಲ. ನಂತರ ಮಗಳು ಕಾಣೆಯಾಗಿದ್ದಾಳೆ ಎಂದು ಮನೆಯವರು ಕಂಪ್ಲೇಟ್ ನೀಡಿದ್ದಾರೆ. ಆಕೆಯ ಫೋನ್ ಕರೆ ಆಧರಿಸಿ ತನಿಖೆ ಮಾಡಿ ಶೇಖ್ ನನ್ನು ಬಂಧಿಸಲಾಗಿದೆ" ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
"ಪರಿಚಯವಾದ ಶೇಖ್ ದರೋಡೆಕೋರ, ಸುಲಿಗೆಕೋರನಾಗಿದ್ದ. ಈತನ ಮೇಲೆ ಹಲವು ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಇವನ ಮೋಸದ ಜಾಲಕ್ಕೆ ಬಿದ್ದ ಯುವತಿಯನ್ನು ಮುಂಬ್ರಾ ಕಾಡಿನಲ್ಲಿ ಕೊಂದುಹಾಕಿದ್ದ" ಎಂದು ಆರ್ಸಿಎಫ್ ಪೊಲೀಸ್ ಸ್ಟೇಷನ್ ಸಿಬ್ಬಂದಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.












Click it and Unblock the Notifications