ರೆಡ್ಡಿ ಚೀನಾ ಸಂಪರ್ಕದ ಮೇಲೆ ಸಿಬಿಐ ಹದ್ದಿನ ಕಣ್ಣು

ಕೃಷ್ಣಪಟ್ಣಂ ಬಂದರು ಮೂಲಕ ಅದಿರು ಸಾಗಾಟದ ಗುರುತು ಸಿಕ್ಕಿದ್ದು, ಬಂದರಿನ ಮಾಲೀಕತ್ವ ಹೊಂದಿರುವ ನವಯುಗ ಸಂಸ್ಥೆಯ ನಿವೃತ್ತ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಅವರನ್ನು ವಿಚಾರಣೆಗಾಗಿ ಸಿಬಿಐ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಈ ಬಂದಿರಿನಿಂದ ಎಷ್ಟು ಟನ್ ಅದಿರು ಸಾಗಾಟವಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮಾಹಿತಿ ಸಿಕ್ಕ ನಂತರ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಅನಿಲ್ ಕುಮಾರ್ ವೈಜಾಗ್ ನಲ್ಲಿ ಸಿಬಿಐ ಎಸ್ ಪಿಯಾಗಿ ಕೂಡಾ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದರು ಎಂಬುದು ವಿಶೇಷ.
ರೆಡ್ಡಿ ಚೀನಾ ಸಂಪರ್ಕ: ಜನಾರ್ದನ ರೆಡ್ಡಿ 2001ರ ಆಸುಪಾಸಿನಲ್ಲಿ ಓಬುಳಾಪುರಂ ಮೈನಿಂಗ್ ಕಂಪನಿ ಕೊಂಡುಕೊಂಡರು. ಆಗ ಕಬ್ಬಿಣದ ಅದಿರಿಗೆ ಇದ್ದ ಬೆಲೆ ಟನ್‌ಗೆ ಕೇವಲ 200 ರೂಪಾಯಿ. ಚೀನಾ ದಲ್ಲಿ ಉಕ್ಕಿಗೆ ಚಿನ್ನದ ಬೆಲೆ ಸಿಗಲು ಶುರುವಾದಾಗ ಅದಿರಿನ ಬೆಲೆ ಸಡನ್ ಆಗಿ 3ರಿಂದ 6 ಸಾವಿರ ರೂ.ಗೆ ಏರಿತು.
ಇದರ ಲಾಭ ಪಡೆದ ರೆಡ್ಡಿ ಸೋದರರು, ಬಳ್ಳಾರಿ ನೆಲವನ್ನು ಅವಿರತವಾಗಿ ಬಗೆದು ಚೀನಾಕ್ಕೆ ಕಳಿಸಿ, ಭರ್ಜರಿ ಲಾಭಗಳಿಸಿದರು.
ಓಎಂಸಿ ಸೇರಿದಂತೆ ರೆಡ್ಡಿಗಳು ನಾಲ್ಕು ಗಣಿಗಳನ್ನು ಹೊಂದಿದ್ದಾರೆ. ಎಲ್ಲವೂ ಆಂಧ್ರಪ್ರದೇಶ ಕರ್ನಾಟಕ ಗಡಿಭಾಗದಲ್ಲಿದೆ. ಅದಿರು ಮಾರಾಟ, ಸಾಗಾಟವನ್ನು ಯಡಿಯೂರಪ್ಪ ಅವರ ಅಂದಿನ ಸರ್ಕಾರ ನಿಷೇಧಿಸಿದ ಮೇಲೆ ಆಂಧ್ರದ ಬಂದರುಗಳ ಮೂಲಕ ಅಕ್ರಮ ಅದಿರು ಸಾಗಾಟ ನಿರಂತರವಾಗಿ ನಡೆಸಲಾಗಿದೆ.
ಅರ್ಧಕ್ಕೆ ನಿಂತ ಉಕ್ಕು ಸ್ಥಾವರ: ಆಂಧ್ರದ ಕಡಪಾ ಜಿಲ್ಲೆಯಲ್ಲಿ ವೈಎಸ್ಸಾರ್ ಪುತ್ರ ಜಗನ್ ಜೊತೆ ಸೇರಿ ಸ್ಥಾಪಿಸಲು ಉದ್ದೇಶಿಸಿದ್ದ ಉಕ್ಕು ಸ್ಥಾವರ ಅರ್ಧಕ್ಕೆ ನಿಂತಿದೆ. 2011ರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಗತ್ತಿನ ಅತಿ ದೊಡ್ಡ ಉಕ್ಕು ಕಂಪನಿ ಆರ್ಸೆಲರ್ ಮಿತ್ತಲ್‌ಗಿಂತ ಬೃಹತ್ ಹೂಡಿಕೆ ಮಾಡಿದ್ದ ರೆಡ್ಡಿಗಳು ಹೊಸ ಉಕ್ಕು ಕಂಪನಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಂತರ ಉಕ್ಕು ಕಂಪನಿ ಸ್ಥಾಪನೆ ಆಗಲೇಇಲ್ಲ.












Click it and Unblock the Notifications