ಸೆ.14ರಿಂದ ಬೆಳಗಾವಿಯಲ್ಲಿ ಸೇನೆಗೆ ನೇಮಕಾತಿ
ಬೆಳಗಾವಿ, ಆಗಸ್ಟ್ 28: ದೇಶದಾದ್ಯಂತ ದೇಶಾಭಿಮಾನ ಉಕ್ಕುತ್ತಿರುವ ಈ ಸಂದರ್ಭದಲ್ಲಿ ನಾಡಿನ ಯುವಕರಿಗೆ ರಾಷ್ಟ್ರಸೇವೆ ಮಾಡುವ ಅವಕಾಶ ಒದಗಿಬಂದಿದೆ. ಏನಪಾ ಅಂದರೆ, ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಸೆಪ್ಟೆಂಬರ್ 14ರಿಂದ 21ರವರೆಗೆ ಬೆಳಗಾವಿ ಸೇನಾ ನೇಮಕಾತಿ ಘಟಕ ಮತ್ತು ಬೆಂಗಳೂರಿನ ಕೇಂದ್ರೀಯ ಸೇನಾ ನೇಮಕಾತಿ ವಿಭಾಗದ ಆಶ್ರಯದಲ್ಲಿ ಬೃಹತ್ ಭೂ ಸೇನಾ ಭರ್ತಿ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 14ರಂದು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ರ‌್ಯಾಲಿ ನಡೆಯಲಿದೆ. ವಿಜಾಪುರ, ಧಾರವಾಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ,ಉಡುಪಿ, ಚಿಕ್ಕಮಳೂರು, ಮಂಗಳೂರು, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ, ಚಿತ್ರದುರ್ಗ, ಗದಗ, ಹಾವೇರಿ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಡಿಎಸ್‌ಸಿಯಲ್ಲಿ ಎಲ್ಲ ಜಿಲ್ಲೆಯ ಮಾಜಿ ಸೈನಿಕರ ನೇಮಕಾತಿ ಸಹ ನಡೆಯಲಿದೆ.

ಸೆ. 16ರಂದು ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಬೆಳಗಾವಿ ಜಿಲ್ಲೆಯ ಅಥಣಿ, ಹುಕ್ಕೇರಿ ತಾಲ್ಲೂಕುಗಳ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಸೆ. 17ರಂದು ಬೆಳಗಾವಿ, ಖಾನಾಪುರ; ಸೆ. 18ರಂದು ಗೋಕಾಕ ಹಾಗೂ ಸವದತ್ತಿ, ಸೆ. 19ರಂದು ಬೈಲಹೊಂಗಲ, ರಾಮದುರ್ಗ, ಚಿಕ್ಕೋಡಿ, ರಾಯಬಾಗ ಹಾಗೂ ಸೆ. 20ರಂದು ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.
ಅಭ್ಯರ್ಥಿಗಳು ರ‌್ಯಾಲಿಗೆ ನಿಗದಿಪಡಿಸಿದ ದಿನದಂದು ಬೆಳಗ್ಗೆ 5 ಗಂಟೆಗೆ ನಿಗದಿತ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಮತ್ತು ಉನ್ನತ ಶಿಕ್ಷಣದ ಮೂಲ ಪ್ರಮಾಣ ಪತ್ರಗಳನ್ನು ರ‌್ಯಾಲಿ ಸಂದರ್ಭದಲ್ಲಿ ತರಬೇಕು. ಪಾಸ್‌ಪೋರ್ಟ್ ಸೈಜಿನ 12 ಭಾವಚಿತ್ರ, ವಾಸ, ಜಾತಿ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ತರಬೇಕು.
ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆ ದಿನಾಂಕವನ್ನು ರ‌್ಯಾಲಿ ಸ್ಥಳದಲ್ಲಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೆಗಾವಿಯ ಸೇನಾ ನೇಮಕಾತಿ ಕಚೇರಿಯನ್ನು (ದೂ: 0831- 2465550 ಅಥವಾ 080-25599290) ಸಂಪರ್ಕಿಸಬಹುದು. ವೆಬ್‌ಸೈಟ್ ವಿಳಾಸ www.zrobangalore.gov.in ನಿಂದಲೂ ಮಾಹಿತಿ ಪಡೆಯಬಹುದು.












Click it and Unblock the Notifications