ಜನ ಲೋಕಪಾಲ ಮಂಡನೆ: ಅಣ್ಣಾಗೆ ಪ್ರಧಾನಿ ಭರವಸೆ

ಅಣ್ಣಾ ಅವರ ಹೋರಾಟ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರೊಟ್ಟಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ. ನಂತರ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಪ್ರಧಾನಿ ಅಣ್ಣಾಗೆ ಪತ್ರ ಬರೆದು ಕಳಿಸಿದ್ದಾರೆ.
ಮಸೂದೆ ಮಂಡನೆಗೆ ಸಿದ್ಧ, ಆದರೆ?: ಅಣ್ಣಾ ಅವರ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಪ್ರಧಾನಿ ಸಿಂಗ್, ಸರ್ಕಾರದ ಪರವಾಗಿ ಪ್ರಣಬ್ ಮುಖರ್ಜಿ ಅವರು ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂದಿದ್ದಾರೆ. ಲೋಕಸಭೆ ಸ್ಪೀಕರ್ ಒಪ್ಪಿದರೆ ಜನ ಲೋಕಪಾಲ್ ಮಸೂದೆ ಬಗ್ಗೆ ಚರ್ಚೆ ನಡೆಸಿ ಮಂಡನೆ ಮಾಡಲು ನಾವು ತಯಾರಾಗಿದ್ದೇವೆ. ಸಂಸತ್ತಿನ ಸ್ಥಾನೀಯ ಸಮಿತಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಿದೆ ಎಂದು ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಅಣ್ಣಾ ಪರವಾಗಿ ಮಾತುಕತೆ ನಡೆಸಲು ಮೂವರನ್ನು ನೇಮಿಸುವ ಸಾಧ್ಯತೆಯಿದ್ದು, ಯಾರು ಯಾರು ಸಂಧಾನ ಮಾತುಕತೆ ನಡೆಸಬೇಕು ಎಂಬುದನ್ನು ಅಣ್ಣಾ ಸೂಚಿಸಲಿದ್ದಾರೆ.
ಈ ಮಧ್ಯೆ ಆ.23ರಂದು ಸಂಜೆ 6.45 ಗಂಟೆ ಸುಮಾರಿಗೆ ಅರವಿಂದ್ ಕ್ರೇಜಿವಾಲ, ಪ್ರಶಾಂತ ಭೂಷಣ್ ಅವರು ಕೇಂದ್ರ ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅರವಿಂದ್ ಅವರೊಡನೆ ನಡೆಸಿದ ಈವರೆಗಿನ ಮಾತುಕತೆ ಫಲಪ್ರದವಾಗಿದೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷೀದ್ ಹೇಳಿದ್ದಾರೆ.
ಅಣ್ಣಾ ಅರೋಗ್ಯದ ಬಗ್ಗೆ ಕಾಳಜಿ: 74 ವರ್ಷದ ದೇಶಭಕ್ತನ ದೇಹ ತೂಕ 72 ಕೆಜಿಯಿಂದ 67 ಕೆಜಿಗೆ ಇಳಿದಿದೆ. ಬಿಪಿ 130/90 ಇದೆ. ಹೃದಯ ಬಡಿತ ನಿಮಿಷಕ್ಕೆ 90 ರಷ್ಟಿದೆ. ದೇಹದಲ್ಲಿ ನೀರಿನ ಅಂಶ ಕ್ಷೀಣಿಸಿ, ಸೋಡಿಯಂ, ಫ್ಲೋರೈಡ್ ಪ್ರಮಾಣ ಕಡಿಮೆಯಾಗಿ ಮೂತ್ರಕೋಶಕ್ಕೆ ತೊಂದರೆಯಾಗಬಹುದು ಅಥವಾ ಹೃದಯ ಬಡಿತ ಕ್ಷೀಣಿಸಿ ಹೃದಯಾಘಾತ ಸಂಭಿಸುವ ಭೀತಿಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
ಆದರೆ, ಛಲ ಬಿಡದ ಅಣ್ಣಾ ಆರೋಗ್ಯ ಕ್ಷೀಣಿಸಿದರೂ ಬತ್ತದ ಉತ್ಸಾಹದಿಂದ ರಾಮಲೀಲ ಮೈದಾನದಲ್ಲಿ ಸತ್ಯಾಗ್ರಹ ನಿರತರಾಗಿದ್ದಾರೆ.
;











Click it and Unblock the Notifications