ಹಾಡಹಗಲೇ 13 ಲಕ್ಷ ರು ದರೋಡೆ, ಬೆಚ್ಚಿದ ಮಲ್ಲೇಶ್ವರ

ಮಲ್ಲೇಶ್ವರಂ ಸಂಪಿಗೆ ರಸ್ತೆ ಮಂತ್ರಿ ಮಾಲ್ ಮುಂಭಾಗ ಬಿಳಿ ಬಣ್ಣದ ಇನ್ನೋವಾ ವಾಹನದಲ್ಲಿ ಬಂದ ಉದ್ಯಮಿಯ ಬಳಿ ಕ್ಯಾಶ್ ತುಂಬಿದ್ದ ಬ್ಯಾಗ್ ಇರುವುದನ್ನು ದುಷ್ಕರ್ಮಿಗಳು ಗಮನಿಸಿದ್ದಾರೆ. ಉದ್ಯಮಿಯ ಗಮನ ಬೇರೆದೆ ಸೆಳೆದು ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುಟುಂಬ ಸಮೇತ ಮಂತ್ರಿ ಮಾಲ್ ಗೆ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕುಮಾರ್ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಹಿಂಬದಿಯಿಂದ ಬಂದ ದುಷ್ಕರ್ಮಿಯೊಬ್ಬ ಕಾರು ತೆಗೆಯಿರಿ, ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಜೋರು ಮಾಡಿದ್ದಾನೆ.
ಕಾರು ಡೋರ್ ತೆಗೆದು ಕೆಳಗೆ ಇಳಿಯುವ ಪ್ರಯತ್ನದಲ್ಲಿದ್ದ ಕುಮಾರ್ ಗೆ ಹಿಂಬದಿ ಸೀಟಿನಲ್ಲಿ ಐವತ್ತು ರು ಬಿದ್ದಿದೆ ನೋಡಿ ಎಂದು ದುಷ್ಕರ್ಮಿ ಹೇಳಿ ಗಮನ ಬೇರೆಡೆ ಸೆಳೆದಿದ್ದಾನೆ. ಐವತ್ತು ರು ಆಸೆಗೆ ಹಿಂದೆ ತಿರುಗಿದ ಕುಮಾರ್ 13 ಲಕ್ಷ ಕಳೆದು ಕೊಂಡಿದ್ದಾರೆ.
ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ವಿಚಲಿತರಾದ ಉದ್ಯಮಿ ಕುಮಾರ್ ಗೋಳಿಡುತ್ತಾ ಮಲ್ಲೇಶರಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆಗೆ ಇನ್ನೋವಾ ಕಾರು ಮೂಕ ಸಾಕ್ಷಿಯಾಗಿ ನಿಂತಿದೆ.
ಇತ್ತೀಚೆಗೆ ಸಿವಿ ರಾಮನ್ ನಗರದ ಸುರಂಜನ್ ದಾಸ್ ರಸ್ತೆ ಬಳಿ ಅರವಿಂದ್ ಎಂಬ ಟೆಕ್ಕಿಯೊಬ್ಬರ ಬಳಿ ಇದ್ದ 10 ಲಕ್ಷ ರೂ ನಗದನ್ನು ಮಂಗಮಾಯ ಮಾಡಲಾಗಿತ್ತು. ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಪಕ ಕೆ. ಮಂಜು ಅವರಿಗೆ ಸೇರಿದ್ದ 4 ಲಕ್ಷ ರೂ ಹಣವನ್ನು ಅಪಹರಿಸಲಾಗಿತ್ತು.












Click it and Unblock the Notifications