ಮಹಮ್ಮದ್ ಅಸ್ಗರ್ ಹತ್ಯೆ ನಡೆದದ್ದು ಹೇಗೆ?

ಮಹಮ್ಮದ್ ಅಸ್ಗರ್ ನಮಗೆ ಹಿಂಸೆ ನೀಡುತ್ತಿದ್ದುದಲ್ಲದೆ, ನಮ್ಮನ್ನು ಎತ್ತಂಗಡಿ ಮಾಡಲು ಹುನ್ನಾರ ನಡೆಸಿದ್ದನು. ಆಗಾಗ್ಗೆ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಅಲ್ಲದೆ ಸಾಬುಲಾಲ್ ಎಂಬಾತನ ಹುಡುಗರನ್ನು ಎತ್ತಿಕಟ್ಟಿ ನಮ್ಮನ್ನು ಮುಗಿಸಲು ಸಂಚು ರೂಪಿಸಿದ್ದನು ಹಾಗಾಗಿಯೇ ಆತ ಜೀವಂತವಿದ್ದರೆ ನಮಗೆ ಆಪತ್ತು ತಪ್ಪಿದಲ್ಲ ಎಂಬ ಭಯದಿಂದ ಹತ್ಯೆ ಮಾಡಿರುವುದಾಗಿ ಪ್ರಮುಖ ಆರೋಪಿ ಕೆ.ಪಿ.ಮೊಹಲ್ಲಾದ ಅಮ್ಜದ್ ಖಾನ್ ಪೊಲೀಸರಿಗೆ ವಿಚಾರಣೆ ಸಂದರ್ಭ ತಿಳಿಸಿದ್ದಾನೆ.
ಹತ್ಯೆ ಪ್ರಕರಣದಲ್ಲಿ ಆರೋಪಿಯ ಸಹೋದರ ಜಮ್ಮು ಎಂಬಾತನೂ ಭಾಗಿಯಾಗಿದ್ದು, ಆತ ತಲೆ ಮರೆಸಿಕೊಂಡಿದ್ದು ಸದ್ಯದಲ್ಲಿಯೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ. ಮಹಮ್ಮದ್ ಅಸ್ಗರ್‌ನ ಹತ್ಯೆಗೆ ಅಮ್ಜದ್ ಖಾನ್ ಹಾಗೂ ಸಹೋದರ ಜಮ್ಮು ಬೆಂಗಳೂರಿನಿಂದ ಇಬ್ಬರು ಬಾಡಿಗೆ ಹಂತಕರಾದ ನವೀನ್ ಹಾಗೂ ವೆಂಕಟೇಶ್ ಎಂಬಿಬ್ಬರನ್ನು ಕರೆತಂದಿದ್ದರು. ಅಲ್ಲದೆ ಮೂಹೂರ್ತ ಫಿಕ್ಸ್ ಮಾಡಲು ಕಾದು ಕುಳಿತಿದ್ದರು.
ಅಸ್ಗರ್‌ನ ಹತ್ಯೆ ಮಾಡಿದರು : ಮಹಮ್ಮದ್ ಅಸ್ಗರ್‌ಗೆ ಹಜ್ ಯಾತ್ರೆಗೆ ಹೋಗುವ ತಯಾರಿಯಲ್ಲಿದ್ದಾನೆ ಎಂಬ ಮಾಹಿತಿ ಹಂತಕ ಪಡೆಗೆ ತಿಳಿದಿತ್ತಲ್ಲದೆ, ಈ ಸಂಬಂಧ ಆತ ವೀಸಾಕ್ಕಾಗಿ ಅರ್ಜಿ ಸಲ್ಲಿಸಲೆಂದು ಫೆಬ್ರವರಿ 11ರಂದು ಬೆಂಗಳೂರಿಗೆ ತೆರಳಿರುವುದು ಕೂಡ ಗೊತ್ತಾಗಿತ್ತು. ಅಲ್ಲಿ ಕೆಲಸ ಮುಗಿಸಿ ಎಷ್ಟೇ ಹೊತ್ತಾದರೂ ಮರಳಿ ಚಾಮರಾಜನಗರಕ್ಕೆ ಬಂದೇ ಬರುತ್ತಾನೆ ಎಂಬ ನಂಬಿಕೆ ಹಂತಕ ಪಡೆಯದಾಗಿತ್ತು. ಹಾಗಾಗಿ ಚಾಮರಾಜನಗರದ ಬಸ್ ನಿಲ್ದಾಣದ ಬಳಿ ವ್ಯಾನ್‌ನಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ಕಾಯುತ್ತಿದ್ದರು. ಅತ್ತ ಬೆಂಗಳೂರಿನಲ್ಲಿ ಮಹಮ್ಮದ್ ಆಸ್ಗರ್‌ನ ಕೆಲಸ ಮುಗಿಯುವ ವೇಳೆಗೆ ರಾತ್ರಿಯಾಗಿದೆ. ಅಲ್ಲಿಂದ ಮೈಸೂರಿಗೆ ಬಂದು ಮೈಸೂರಿನಲ್ಲಿ ಊಟ ಮುಗಿಸಿ ಮತ್ತೆ ಚಾಮರಾಜನಗರಕ್ಕೆ ಜೀವಾ ಎಂಬ ಬಸ್ಸಿನಲ್ಲಿ ಹೊರಟಿದ್ದಾನೆ.
ಚಾಮರಾಜನಗರ ತಲುಪುವ ವೇಳೆಗೆ ಮಧ್ಯರಾತ್ರಿಯಾಗಿದೆ. ಬಸ್‌ಸ್ಟ್ಯಾಂಡ್‌ನಲ್ಲಿಳಿದು ಮನೆಯತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಹಿಂಬಾಲಿಸಿ ಬಂದ ಹಂತಕ ಪಡೆ ಎಳೆದು ವ್ಯಾನ್‌ನೊಳಕ್ಕೆ ಹಾಕಿದೆ. ಆತ ಯಾವುದೇ ಕಾರಣಕ್ಕೂ ಕಿರುಚದಂತೆ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡ ಹಂತಕರು ನೇರವಾಗಿ ರಾಮಸಮುದ್ರದ ಬಳಿಯಿರುವ ನಿರ್ಜನ ಪ್ರದೇಶವಾದ ಸುರಗಿಗುಡ್ಡಕ್ಕೆ ಎಳೆದೊಯ್ದಿದೆ. ಅಲ್ಲಿ ಇಬ್ಬರು ಹಂತಕರು ನಿಂತು ನೋಡುತ್ತಿದ್ದರೆ ವೆಂಕಟೇಶ್ ಹಾಗೂ ನವೀನ್ ಮಚ್ಚು ಬೀಸಿದ್ದಾರೆ.
ಮಚ್ಚಿನೇಟಿಗೆ ಕಮಕ್‌ಕಿಮಕ್ ಎನ್ನದೆ ಅಸ್ಗರ್ ಪ್ರಾಣ ಬಿಟ್ಟಿದ್ದಾನೆ. ಬಳಿಕ ಅಲ್ಲಿಂದ ಹೆಣವನ್ನು ವ್ಯಾನ್‌ನಲ್ಲಿ ತಂದು ಚಾಮರಾಜನಗರದ ನ್ಯಾಯಾಲಯದ ಎದುರಿಗೆ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಎಸೆದು ಹಂತಕರು ಪರಾರಿಯಾಗಿದ್ದರು.
ರಹಸ್ಯ ಬಯಲು : ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿದ ಚಾಮರಾಜನಗರ ಪೊಲೀಸರಿಗೆ ಕಳೆದೊಂದು ತಿಂಗಳ ಹಿಂದೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಯುವಕರು ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ವಿಚಾರಣೆಗೊಳಪಡಿಸಿ ಚಾಮರಾಜನಗರಕ್ಕೆ ಬಂದ ಬಗ್ಗೆ ಕೇಳಿದಾಗ ಮಹಮ್ಮದ್ ಅಸ್ಗರ್‌ನ ಹತ್ಯೆಮಾಡಲು ನಮ್ಮನ್ನು ಕರೆಯಿಸಲಾಗಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು. ಅವರು ನೀಡಿದ ಸುಳಿವಿನಂತೆ ಕಾರ್ಯಾಚರಣೆ ನಡೆಸಿ ಇದೀಗ ಪ್ರಮುಖ ಆರೋಪಿ ಅಮ್ಜದ್‌ಖಾನ್‌ನ್ನು ಬಂಧಿಸಲಾಗಿದೆ. ಸಧ್ಯದಲ್ಲಿಯೇ ಇನ್ನೊಬ್ಬ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.












Click it and Unblock the Notifications