ಪ್ರತಿ ಹಳ್ಳಿಗೂ ಹಬ್ಬಲಿದೆ ಬ್ರಾಡ್‌ಬ್ಯಾಂಡ್ ವೈರುಗಳು

'ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ' ಹೆಸರಿನ ಈ ಯೋಜನೆಯು ಜಿಲ್ಲೆ, ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದವರೆಗೆ ಬ್ರಾಡ್‌ಬ್ಯಾಂಡ್ ಜಾಲ ವಿಸ್ತರಿಸುವ ಉದ್ದೇಶ ಹೊಂದಿದೆ. ದೇಶದ ಎಲ್ಲ ಹಳ್ಳಿಗಳಿಗೂ ಈ ಸೌಲಭ್ಯ ಲಭ್ಯವಾದಾಗ ತ್ವರಿತ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಅಲ್ಲದೇ ಇ-ಆಡಳಿತ, ಇ-ಶಿಕ್ಷಣ, ಇ-ವೈದ್ಯಕೀಯ ಮತ್ತಿತರ ಸೇವೆಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ಅನುಕೂಲವಾಗುತ್ತದೆ.
'ದೂರಸಂಪರ್ಕ ಆಯೋಗವು ಈ ಯೋಜನೆಗೆ ಅನುಮೋದನೆ ನೀಡಿದ್ದು, ಸಾರ್ವತ್ರಿಕ ಸೇವಾ ಒಪ್ಪಂದ ನಿಧಿ ಮೂಲಕ ಇದಕ್ಕೆ ಹಣಕಾಸು ನೆರವು ನೀಡಲಾಗುತ್ತದೆ. ಈ ಪ್ರಸ್ತಾವವನ್ನು ಅಂತಿಮ ಅನುಮೋದನೆಗಾಗಿ ಶೀಘ್ರವೇ ಕೇಂದ್ರ ಸಂಪುಟದ ಮುಂದೆ ಇಡಲಾಗುತ್ತದೆ' ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದರು.
ಯೋಜನೆಯನ್ನು ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ (ಬಿಎಸ್‌ಎನ್‌ಎಲ್) ಹಾಗೂ ಏರ್ ಟೆಲ್‌ನಂಥ ಸಂಸ್ಥೆಗಳು ಜಾರಿಗೆ ತರುತ್ತವೆ ಎಂದೂ ಸಚಿವರು ಹೇಳಿದರು. ಇನ್ನೆರಡು ವರ್ಷಗಳಲ್ಲಿ 75 ದಶಲಕ್ಷ ಹಾಗೂ 2014 ರೊಳಗೆ 160 ದಶಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ಡಿಸೆಂಬರಿನಲ್ಲಿ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಗುರಿ ಹಾಕಿಕೊಂಡಿದೆ.












Click it and Unblock the Notifications