ಹೆಂಡ್ತಿ, ಮಗಳಿಗೇ ಕೈಕೊಟ್ಟ ವೈದ್ಯನಿಗೆ ಕೋರ್ಟ್ ಛೀಮಾರಿ

ಈ ಪತಿ ಮಹಾಶಯನ ಹೆಸರು ಡಾ.ಸಿ.ಕೆ. ಕಾಂಬ್ಳೆ. ಈತ ಕೇಂದ್ರ ರೇಷ್ಮೆ ನಿಗಮದ ನಿರ್ದೇಶಕ. ಕಾಂಬ್ಳೆ, ಶೀಲಾ ಎಂಬುವರನ್ನು 1992ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 1998ರಲ್ಲಿ ಗುಣಶೀಲ (ಇಬ್ಬರ ಹೆಸರುಗಳನ್ನು ಬದಲಿಸಲಾಗಿದೆ) ಎಂಬ ಮಗುವಾಯಿತು. ಆದರೆ ಮುಂದೆ ಕಾಂಬ್ಲೆ ಚಪಲಚನ್ನಿಗರಾಯನಾಗಿ ಮಾರ್ಪಟ್ಟ. ಒಂದಷ್ಟು ಅನೈತಿಕ ಸಂಗಗಳ ಜತೆಗೆ ಇನ್ನಿಬ್ಬರನ್ನು ವಿವಾಹವೂ ಆಗಿದ್ದಾನೆ ಎಂದು ಆರೋಪಿಸಿ ಶೀಲಾ, ಪತಿಯಿಂದ ಬೇರ್ಪಟ್ಟರು.
ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿ ಇರುವ ತಮಗೆ ಕಡಿಮೆ ಸಂಬಳ. ಇದರಿಂದ ತಮ್ಮ ಹಾಗೂ ಮಗಳ ನಿರ್ವಹಣೆ ಕಷ್ಟ. ಆದುದರಿಂದ 40 ಸಾವಿರ ಸಂಬಳ ಪಡೆಯುವ ಪತಿಯು, ಪುತ್ರಿಗೆ ನಿರ್ವಹಣಾ ಭತ್ಯೆ ನೀಡಲು ಆದೇಶಿಸುವಂತೆ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದರು.
ನಾಟಕದ ಸೂತ್ರಧಾರ: ಆಗ ಶುರುವಾಯಿತು ನೋಡಿ ಕಾಂಬ್ಲೆಯ ವಿದ್ವತ್ ಪ್ರದರ್ಶನ. ನಿರ್ವಹಣಾ ಭತ್ಯೆ ನೀಡಬೇಕಲ್ಲ ಎಂದು ಲೆಕ್ಕಾಚಾರ ಹಾಕಿದ ಕಾಂಬ್ಳೆ, ಮೊದಲ ಹಂತವಾಗಿ ಶೀಲಾ ತನ್ನ ಪತ್ನಿಯೇ ಅಲ್ಲ ಎಂದು ಸಾಬೀತು ಮಾಡಲು ಹರಸಾಹಸಪಟ್ಟ. ಆದರೆ ಸಂಪ್ರದಾಯಬದ್ಧ ವಿವಾಹದ ಕುರಿತಾದ ದಾಖಲೆಗಳ ಮುಂದೆ ಶೀಲಾನ್ನು ಪತ್ನಿ ಎಂದು ಒಪ್ಪಿಕೊಳ್ಳದೇ ಬೇರೆ ವಿಧಿ ಇರಲಿಲ್ಲ.
ಇನ್ನು, ನಿರ್ವಹಣಾ ಭತ್ಯೆಯನ್ನು ಮಗಳು ಪಡೆಯಬೇಕಿರುವ ಕಾರಣ, ಆಕೆ ತಮ್ಮ ಮಗಳು ಅಲ್ಲವೇ ಅಲ್ಲ ಎಂದು ವಾದಿಸತೊಡಗಿದರು. ಆದರೆ ಗಟ್ಟಿಗಿತ್ತಿ ಶೀಲಾ ಪತಿ ಮತ್ತು ಮಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಎಂದು ಸರಕಾರಿ ಸವಾಲು ಹಾಕಿದರು. ಈ ಪರೀಕ್ಷೆಗೆ ನಾನು ಒಲ್ಲೆ ಎಂದು ಕಾಂಬ್ಳೆ ರೊಳ್ಳೆ ತೆಗೆದನಾದರೂ ಕೋರ್ಟ್ ಅದಕ್ಕೆ ಸೊಪ್ಪು ಹಾಕಿಲಿಲ್ಲ.
ದೃಢಪಡಿಸಿದ ವರದಿ: ಪರೀಕ್ಷೆಯಿಂದ ಕಾಂಬ್ಳೆಯೇ ಪ್ರಿಯಾಳ ತಂದೆ ಎನ್ನುವುದು ದೃಢಪಟ್ಟಿತು. ಆದರೆ ಈ ಪ್ರಕಾಂಡ ಪಂಡಿತ ಡಾಕ್ಟರ್ ಅಲ್ಲಿಗೇ ಸುಮ್ಮನಾಗಲಿಲ್ಲ. ತನಗೆ ಅತಿ ಬುದ್ಧಿ ಇದೆಯೆಂದು ಡಿಎನ್ಎ ಪರೀಕ್ಷೆ ನಡೆಸಿದ ವೈದ್ಯರೇ ಸರಿಯಿಲ್ಲ ಎಂದ. 'ವೈದ್ಯರು ಪರೀಕ್ಷೆ ನಡೆಸಿದ ರೀತಿ ಸರಿಯಿಲ್ಲ, ಪರೀಕ್ಷೆಗೆ ಸರಿಯಾದ ಉಪಕರಣ ಬಳಸಿಲ್ಲ, ರಕ್ತದ ಮಾದರಿಯನ್ನು ವೈಜ್ಞಾನಿಕವಾಗಿ ಪಡೆದುಕೊಂಡಿಲ್ಲ' ಎಂದೆಲ್ಲ ಖ್ಯಾತೆ ತೆಗೆದ.
ಆದರೂ ಪರೀಕ್ಷೆ ನಡೆಸಿದ ವೈದ್ಯರು ತುಂಬಾ ತಜ್ಞರು ಎಂದು ಕೋರ್ಟ್‌ನಿಂದ ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ಮೂರು ಲಕ್ಷ ರೂಪಾಯಿ ಮೊತ್ತವನ್ನು ಮಗಳ ಹೆಸರಿನಲ್ಲಿ ಠೇವಣಿ ಇಡುವಂತೆ ಹಾಗೂ ಆಕೆಗೆ ಮಾಸಿಕ 400 ರೂಪಾಯಿ ನಿರ್ವಹಣಾ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತು.
ಹೈಕೋರ್ಟ್ ಮೊರೆ: ಈಗಿನ ದುಬಾರಿ ಕಾಲದಲ್ಲಿ 400 ರೂಪಾಯಿ ಎಲ್ಲಿಯೂ ಸಾಕಾಗುವುದಿಲ್ಲ ಎಂದು ದೂರಿ ಗುಣಶೀಲಾ, ತಂದೆಯ ವಿರುದ್ಧ ಹೈಕೋರ್ಟ್ ಮೊರೆ ಹೋದರು. 'ಮೂರು ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟರೆ ತಿಂಗಳಿಗೆ 2,900 ರೂಪಾಯಿ ಮಾತ್ರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ 400 ರೂಪಾಯಿ ನೀಡಿದರೆ ಅದು ಇಂದಿನ ದಿನಗಳಲ್ಲಿ ಯಾವುದಕ್ಕೂ ಸಾಕಾಗುವುದಿಲ್ಲ' ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಈ ಠೇವಣಿ ಜೊತೆಗೆ ಮಾಸಿಕ 4 ಸಾವಿರ ರೂಪಾಯಿ ನೀಡುವಂತೆಯೂ ಆದೇಶಿಸಿ, 'ವೈದ್ಯೋನಾರಾಯಣೋ' ಕಾಂಬ್ಲೆಗೆ ತಲೆತಗ್ಗಿಸುವಂತೆ ಮಾಡಿತು.












Click it and Unblock the Notifications