ಅಮೆರಿಕಕ್ಕೆ ಹೊರಟ ಮಧುಕರ ಶೆಟ್ಟಿ: ಭ್ರಷ್ಟರು ನಿರಾಳ

IPS Madhukar Shetty
ಬೆಂಗಳೂರು, ಜುಲೈ 3: ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಐಪಿಎಸ್ ಅಧಿಕಾರಿ ಕೆ. ಮಧುಕರ ಶೆಟ್ಟಿ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಹುದ್ದೆಯಿಂದ ಕಳೆದ ವಾರ ಬಿಡುಗಡೆಗೊಂಡರು. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರು ಕರ್ತವ್ಯದಿಂದ ಬಿಡುಗಡೆಯಾಗಿದ್ದಾರೆ.

ಎರಡು ವರ್ಷ ಎಂಟು ತಿಂಗಳ ಕಾಲ ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅವರು ಸಂಸ್ಥೆಯ ಇತಿಹಾಸದಲ್ಲೇ ಮಹತ್ವ ಎನಿಸುವಂತಹ ಪ್ರಕರಣಗಳನ್ನು ನಿರ್ವಹಿಸಿದ್ದರು. ಶಾಸಕರು, ಸಚಿವರನ್ನೂ ಕಾನೂನಿನ ಬಲೆಗೆ ಕೆಡವುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಹಿರಿಯು ಪತ್ರಕರ್ತ, ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರ ಮಧುಕರ್ 1999ನೇ ಸಾಲಿನ ಐಪಿಎಸ್ ಅಧಿಕಾರಿ. 2008ರ ನವೆಂಬರ್ ನಲ್ಲಿ ಲೋಕಾಯುಕ್ತಕ್ಕೆ ಆಗಮಿಸಿದ್ದರು. ಆರಂಭದಿಂದಲೇ ಪ್ರಾಮಾಣಿಕ ಅಧಿಕಾರಿಗಳ ತಂಡ ಕಟ್ಟಿಕೊಂಡಿದ್ದ ಅವರು, ಹಲವು ಪ್ರಕರಣಗಳ ತನಿಖೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಅಧ್ಯಯನಕ್ಕಾಗಿ ವಿದೇಶಕ್ಕೆ: ಎಂ.ಎ ಪದವೀಧರರಾದ ಶೆಟ್ಟಿ, ಈಗ ಪಿಎಚ್‌.ಡಿ ಸಂಶೋಧನಾ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅಧ್ಯಯನ ರಜೆ ಪಡೆದುಕೊಂಡಿದ್ದಾರೆ. ಶುಕ್ರವಾರದಿಂದ ಅವರ ರಜೆ ಆರಂಭವಾಗಲಿದ್ದು, 2013ರ ಆ. 1ರಂದು ಕರ್ತವ್ಯಕ್ಕೆ ಮರಳುವರು.

ಕೆಐಎಡಿಬಿ ಭೂಹಗರಣದ ತನಿಖೆಯನ್ನು ಗುರುವಾರ (ಜೂನ್ 30) ಅಂತಿಮಘಟ್ಟಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಅವರು, ಅಂದೇ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಹುದ್ದೆಯಿಂದ ಬಿಡುಗಡೆ ಹೊಂದಿದರು.

ಉದ್ಯಮಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕೆಜಿಎಫ್ ಶಾಸಕ ವೈ. ಸಂಪಂಗಿಯನ್ನು ಶಾಸಕರ ಭವನದಲ್ಲೇ ಬಂಧಿಸಿ, ರಾಜ್ಯದ ರಾಜಕಾರಣಿಗಳಿಗೆ 'ಶಾಕ್' ನೀಡಿದ್ದರು. ಹಲವು ಕೆಎಎಸ್, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಲಂಚ ಪ್ರಕರಣದಲ್ಲಿ ಬಂಧಿಸುವಲ್ಲೂ ಯಶಸ್ವಿಯಾಗಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜು ಬಂಧನದ ಮೂಲಕ ಪಾಲಿಕೆ ಸದಸ್ಯರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕಡತಗಳಲ್ಲಿ ಹೂತುಹೋಗಿದ್ದ ಕೆಐಎಡಿಬಿ ಭೂಹಗರಣವನ್ನು ಭೇದಿಸಿದ್ದು ಲೋಕಾಯುಕ್ತ ಎಸ್‌ಪಿಯಾಗಿ ಮಧುಕರ ಶೆಟ್ಟಿ ಅವರ ಮಹತ್ವದ ಸಾಧನೆ.

ಹಗರಣದ ಸಾಕ್ಷಿಯೊಬ್ಬರಿಗೆ ಲಂಚ ನೀಡುತ್ತಿರುವಾಗ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಅವರನ್ನು ಬಂಧಿಸುವುದರೊಂದಿಗೆ ತನಿಖೆಯಲ್ಲಿ ಮಹತ್ವದ ಮುನ್ನಡೆ ಸಾಧಿಸಿದ್ದರು. ನಂತರದ ಕೆಲವೇ ದಿನಗಳಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಪರಿಣಾಮವಾಗಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+