ಜಿಮ್ ಶಿಕ್ಷಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರ ಸೆರೆ

ದ್ವಾರಕಾ ಡಿಡಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸಮೀಪವಿರುವ ಜಿಮ್ ಕೇಂದ್ರದಲ್ಲಿ ಇಬ್ಬರು ಅತ್ಯಾಚಾರ ನಡೆಸಿದ್ದಾರೆ ಎಂದು ರೋಹಿಣಿ ಎಂಬ ತರಬೇತುದಾರಳು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಜಿಮ್ ಮ್ಯಾನೇಜರ್ ಅಜಯ್ ಪ್ರತಾಪ್ ಮತ್ತು ಆತನ ಸ್ನೇಹಿತ ಕಮಲೇಶ್ ಬಂಧಿತ ಆರೋಪಿಗಳು.
ಸದರಿ ಹೆಲ್ತ್ ಕ್ಲಬ್ ನಲ್ಲಿ ಒಂದು ತಿಂಗಳ ಹಿಂದೆ ರೋಹಿಣಿ ಜಿಮ್ ಟ್ರೈನರ್ ಹುದ್ದೆಗೆ ನೇಮಕಗೊಂಡಿದ್ದಳು. ತದನಂತರ ತರಬೇತಿಯನ್ನು ಪಡೆಯುತ್ತಿದ್ದಳು. ಜೂನ್ 19 ಮತ್ತು 24ರಂದು ಪ್ರತಾಪ್, ರೋಹಿಣಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಭಯಗೊಂಡ ರೋಹಿಣಿ ವಿಷಯವನ್ನು ತಕ್ಷಣ ಯಾರಿಗೂ ಹೇಳಿರಲಿಲ್ಲ ಎಂದು ಬಾಧಿತಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಪ್ರತಾಪ್ ಸ್ನೇಹಿತ ಕಮಲೇಶ್ ಸಹ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ವಿಷಯವನ್ನು ರೋಹಿಣಿ ತನ್ನ ಗೆಳೆಯನಿಗೆ ವಿವರಿಸಿದ್ದಾಳೆ. ಪ್ರತಾಪ್ ಮತ್ತು ಕಮಲೇಶ್ ನನ್ನು ರೋಹಿಣಿ ಗೆಳೆಯ ವಿಚಾರಿಸಲು ಮುಂದಾದಾಗ ಇಬ್ಬರೂ ಆತನನ್ನು ದನಕ್ಕೆ ಬಡಿದಂತೆ ಬಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರೋಹಿಣಿ ಗೆಳೆಯನನ್ನು ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳಿಬ್ಬರನ್ನೂ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.












Click it and Unblock the Notifications