ಗೌಡರ ಬಳಿ 1500 ಕೋಟಿ ರು. ಅಕ್ರಮ ಸಂಪತ್ತು

"ಜನರಿಂದಲೇ ಆಶೀರ್ವಾದ ಪಡೆದಿರುವ ಜನಪ್ರಿಯ ಸರಕಾರವನ್ನು ಆರಂಭದಿಂದಲೂ ಅಸ್ಥಿರಗೊಳಿಸುವ ಹುನ್ನಾರ ದೇವೇಗೌಡರ ಕುಟುಂಬ ನಡೆಸುತ್ತಲೇ ಬಂದಿದೆ. ಪ್ರಧಾನಿ ಸ್ಥಾನವೇರಿದವರಿಗೆ ಇದು ಶೋಭೆಯಲ್ಲ. ಕುಮಾರಸ್ವಾಮಿಯಿಂದಲೇ ಭೂ ಸ್ವಾಧೀನ ಕಾಯ್ದೆಯ ಗರಿಷ್ಠ ದುರುಪಯೋಗವಾಗಿದೆ. 1500 ಕೋಟಿ ರು.ಗಿಂತಲೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ. ಇಷ್ಟು ಮೊತ್ತ ಅವರ ಬಳಿ ಎಲ್ಲಿಂದ ಬಂತು" ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಪ್ರಧಾನ ಕಾರ್ಯದರ್ಶಿ, ವಕ್ತಾರೆ ನಿರ್ಮಲಾ ಸೀತಾರಾಮನ್ ಅವರ ಉಪಸ್ಥಿತಿಯಲ್ಲಿ ಚಾರ್ಜ್ ಶೀಟನ್ನು ಬಿಡುಗಡೆ ಮಾಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೂ ನಮ್ಮ ಬಳಿ ಪುರಾವೆಗಳಿವೆ ಎಂದು ಅವರು ಗುಡುಗಿದರು.
ಗೌಡರು ಮತ್ತು ಮಕ್ಕಳನ್ನು ಚೂರಿಗಿಂತಲೂ ಮೊನಚಾದ ಮಾತುಗಳಿಂದ ತಿವಿದ ನಿರ್ಮಲಾ ಸೀತಾರಾಮನ್ ಅವರು, ಜನಪ್ರಿಯ ಸರಕಾರವನ್ನು ಗೌಡರು ಸತತವಾಗಿ ಅಸ್ಥಿರಗೊಳಿಸುವ ಯತ್ನ ಮಾಡುತ್ತಲೇ ಬಂದಿದ್ದಾರೆ. ಇದು ದೇವೇಗೌಡರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ, ಸಿಟಿ ರವಿ ಮುಂತಾದವರಿದ್ದರು.
ಚಾರ್ಜ್ ಶೀಟ್ ನಲ್ಲಿರುವ ಪ್ರಮುಖ ಅಂಶಗಳು
* ಎಚ್ಡಿಕೆಯಿಂದ 47 ಗಣಿ ಕಂಪನಿಗಳಿಗೆ ಅನುಮೋದನೆ
* ಒಟ್ಟು 550 ಎಕರೆ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಗೆ ಶಿಫಾಸರು
* ಅಧಿಕಾರದ ಕೊನೆ 5 ದಿನಗಳಲ್ಲಿ 22 ಗಣಿ ಕಂಪನಿಗಳಿಗೆ ಒಪ್ಪಿಗೆ
* ಅಧಿಕಾರಾವಧಿಯಲ್ಲಿ 354 ಎಕರೆ ಜಮೀನು ಡಿನೋಟಿಫೈ ಮಾಡಿದ ಎಚ್ಡಿಕೆ
* ಗೌಡರ ಕುಟುಂಬದ 17 ಜನರಿಗೆ 'ಜಿ' ಕೆಟಗರಿ ನಿವೇಶನ ಹಂಚಿಕೆ
* ಕುಮಾರಸ್ವಾಮಿಯಿಂದಲೇ ಅತಿ ಹೆಚ್ಚು ಭೂಕಬಳಿಕೆ
* ಹೊಳೆನರಸೀಪುರದ ಬಳಿ 105 ಎಕರೆ ಅಕ್ರಮವಾಗಿ ಒತ್ತುವರಿ
* ಬೆಂಗಳೂರು ಸುತ್ತಮುತ್ತ 188 ಎಕರೆ ಭೂಮಿ ಕಬಳಿಕೆ
* ರಾಜ್ಯದಲ್ಲಿ 339 ಎಕರೆ ಅಕ್ರಮ ಭೂಮಿ ಗೌಡರ ಬಳಿ
* ಗೌಡರ ಕುಟುಂಬದ ಬಳಿ 1500 ಕೋಟಿ ರು. ಅಕ್ರಮ ಸಂಪತ್ತು
* ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ.
ಮುಖ್ಯಮಂತ್ರಿಗೆ ಬುದ್ಧಿಭ್ರಮಣೆ - ಕುಮಾರಸ್ವಾಮಿ : ನನ್ನ ಮತ್ತು ನನ್ನ ತಂದೆಯ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಯಡಿಯೂರಪ್ಪನವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಅಕ್ರಮ ನಡೆದಿದ್ದರೆ, ಬೇಕಿದ್ದರೆ ಲೋಕಾಯುಕ್ತರಿಂದ ತನಿಖೆ ನಡೆಸಲಿ. ತಪ್ಪಿತಸ್ಥನಾಗಿದ್ದರೆ ಶಿಕ್ಷೆ ನೀಡಲಿ. ನಾನು ಯಾವುದೇ ತನಿಖೆಗೂ ಹೆದರುವುದಿಲ್ಲ ಎಂದು ಕಿಡಿ ಕಾರಿದರು.












Click it and Unblock the Notifications