ಆಣೆ-ಪ್ರಮಾಣ ಜಾಹೀರಾತು: ದುಡ್ಡು ಯಾರದು ಯಡಿಯೂರಪ್ಪ?

'ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೊಂದು ಬಹಿರಂಗ ಪತ್ರ ಬರೆದಿರುವ' ಪೂಜನೀಯ ಮುಖ್ಯಮಂತ್ರಿ ಯಡಿಯೂರಪ್ಪ, ಹಿಟ್ ಅಂಡ್ ರನ್ ಕೇಸ್ ಗೆ ಬಲವಾಗಿ ಉತ್ತರ ನೀಡಿದ್ದಾರೆ. (ಪತ್ರವನ್ನು ವಿವರವಾಗಿ ಓದಲು ಶನಿವಾರದ ಯಾವುದೇ ದಿನಪತ್ರಿಕೆಯನ್ನು ತಿರುವಿ ಹಾಕಬಹುದು).
'ಕುಮಾರಸ್ವಾಮಿಯವರೇ ಜನ ನಿಮ್ಮನ್ನು ನಂಬಬೇಕು ಎಂದರೆ ತಡಮಾಡದೆ ಧರ್ಮಸ್ಥಳಕ್ಕೆ ಬನ್ನಿ. 'ಕುಮಾರ ಸಂಧಾನ'ದ ಬಗ್ಗೆ ಅಲ್ಲಿ ಪ್ರಮಾಣ ಮಾಡಿ ಹೇಳಿ' ಎಂಬ ಒಕ್ಕಣೆಯ ಪತ್ರ ಅದು. ಇದಕ್ಕೆ ಸನ್ಮಾನ್ಯ ಕುಮಾರಸ್ವಾಮಿಯವರೂ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳ ಭೇಟಿ ದಿನಾಂಕವನ್ನು ಇಬ್ಬರೂ ನಾಯಕರು ಚರ್ಚಿಸಿ ಮಹಾಜನತೆಗೆ ತಿಳಿಸುವ ಸಾಧ್ಯತೆ ಇದೆ. ಈ ಮಧ್ಯೆ, ಭಗವಂತಾ ಇಬ್ಬರಿಗೂ ಒಳ್ಳೆಯ ಬುದ್ಧಿ ಕೊಡು ಎಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ಜನತೆ ಬೇಡಿಕೊಂಡಿದ್ದಾರೆ.
ದುರ್ದೈವವೆಂದರೆ, ಇಬ್ಬರು ಮಹಾಮಹಿಮರು ತಮ್ಮ ವೈಯಕ್ತಿಕ ಮಟ್ಟದ ಜಗಳದಲ್ಲಿ ನಿರತರಾಗಿರುವಾಗ ಸನ್ಮಾನ್ಯ ಯಡಿಯೂರಪ್ಪನವರು ಸರಕಾರಿ ಹಣದಲ್ಲಿ ಬಹುತೇಕ ಎಲ್ಲ ವರ್ತಮಾನ ಪತ್ರಿಕೆಗಳ ಮುಖಪುಟಗಳಲ್ಲಿ ಸರಕಾರಿ ಸವಾಲ್ ಹಾಕಿದ್ದಾರೆ. 'ಯಡಿಯೂರಪ್ಪನವರೇ, ಇದರ ಜರೂರತ್ತು ನಿಮಗಿರಬಹುದು. ಆದರೆ ದುಡ್ಡು ಯಾರಪ್ಪನದು ಸ್ವಾಮಿ. ಯಾಕಿಂಥ ಕೆಲಸ ಮಾಡಿದಿರಿ?' ಎಂದು ಸಮಸ್ತ ಕರ್ನಾಟಕದ ಜನ ಕೇಳುವಂತಾಗಿದೆ.












Click it and Unblock the Notifications