ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೂ ಪೊಲೀಸರಾಗಿರಿ, ಜ್ಯೋತಿಪ್ರಕಾಶ್ ಮಿರ್ಜಿ ಸಲಹೆ

By * ಶಾಮ್
|
Google Oneindia Kannada News

Jyothi Prakash Mirji, Bangalore police commissioner
ಬೆಂಗಳೂರು, ಜೂ. 13 : ದುಷ್ಟ ಶಕ್ತಿಗಳನ್ನು ವ್ಯವಸ್ಥಿತವಾಗಿ ಮಟ್ಟ ಹಾಕಿರುವುದರಿಂದ ನಗರದಲ್ಲಿ ಭೂಗತ ಜಗತ್ತಿನ ಚಟುವಟಿಕೆಗಳು ಕುಸಿದು ಬಿದ್ದಿವೆ ಎಂದು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಗರದಲ್ಲಿ ಅಂಡರ್ ವರ್ಲ್ಡ್ ಬಹುತೇಕ ನಿರ್ನಾಮವಾಗಿದೆ. ಆದರೆ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಚಿಲ್ಲರೆ ಪಲ್ಲರೆ ರೌಡಿಗಳು ಇರುವುದು ನಿಜ, ನಮ್ಮ ಪಡೆಗಳು ಅವರನ್ನು ಹದ್ದು ಬಸ್ತಿನಲ್ಲಿಡುವುದು ಅಷ್ಟೇ ನಿಜ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಶಂಕರ ಬಿದರಿ ಅವರ ಉತ್ತರಾಧಿಕಾರಿಯಾಗಿ ನಗರದ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ದಟ್ಸ್ ಕನ್ನಡದೊಂದಿಗೆ ಮಾತನಾಡುತ್ತಿದ್ದ ಮಿರ್ಜಿ ಈ ಮೇಲಿನಂತೆ ಹೇಳಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಮಹಾನಗರದ ಘನತೆ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವ ಯಾವುದೇ ಶಕ್ತಿಗಳನ್ನು ಬಗ್ಗು ಬಡಿಯುವಲ್ಲಿ ತಮ್ಮ ಅಧಿಕಾರಿಗಳು ಹಿಂದೆ ಬೀಳುವುದಿಲ್ಲ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

ಆದರೆ, ಒಂದು ವಿಷಯಯಲ್ಲಿ ಮಿರ್ಜಿಯವರಿಗೆ ಬೇಜಾರಿದೆ. ತಮ್ಮ ತಮ್ಮ ಬಡಾವಣೆಗಳಲ್ಲಿ ಮತ್ತು ಸುತ್ತಮುತ್ತ ನಡೆಯುವ ಅಪರಾಧಗಳ ಬಗ್ಗೆ ಪೊಲೀಸರಿಗೆ ಬೆಂಗಳೂರಿಗರು ಸೂಚನೆ ನೀಡುವಲ್ಲಿ ಹಿಂದೆ ಬಿದ್ದಿದ್ದಾರೆ. ಒಂದು ಸಿಗ್ನಲ್ ಜಂಪ್ ಉಲ್ಲಂಘನೆಯೇ ಆಗಿರಲಿ. ತಕ್ಷಣ ಜನತೆ ಪೊಲೀಸರಿಗೆ ಮಾಹಿತಿ ನೀಡಿದರೆ ನಮಗೆ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ. ಆದರೆ ಬೆಂಗಳೂರು ನಾಗರಿಕರಿಗೆ ಇಂಥ ಪಾಲ್ಗೊಳ್ಳುವಿಕೆಯಲ್ಲಿ ಆಸಕ್ತಿ ಇಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು. ಈಗಿನ ಕಾಲದಲ್ಲಿ ಎಲ್ಲರ ಬಳಿ ಸೆಲ್ ಫೋನ್ ಕ್ಯಾಮರಾ, ಇಮೇಲ್ ಇರುತ್ತದೆ. ಅದನ್ನು ಬಳಸುವುದಕ್ಕೆ ಪ್ರಾಬ್ಲ್ಂ ಯಾಕೆ ಎಂದು ಅವರು ಪ್ರಶ್ನೆ ಹಾಕಿದರು.

ಬೆಂಗಳೂರಿನ ಅತಿದೊಡ್ಡ ಶತ್ರು ಟ್ರಾಫಿಕ್ ಪ್ರಾಬ್ಲಂ ಎನ್ನುವುದನ್ನು ಒಪ್ಪಿಕೊಂಡ ಮಿರ್ಜಿ ಅದಕ್ಕೆ ಪರಿಹಾರಗಳನ್ನು ಕಂಡುಹಿಡಿಯುವುದೂ ಕೂಡ ಅಷ್ಟೇ ದೊಡ್ಡ ಸಮಸ್ಯೆ ಎಂದರು. ಅವೇ ರಸ್ತೆಗಳು. ಅಷ್ಟೇ ಜಾಗ ಆದರೆ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದರೆ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸುವುದು ದುಸ್ಸಾಧ್ಯವೇ ಸರಿ ಎಂದರು. ಸ್ವಯಂಪ್ರೇರಣೆಯಿಂದ ನಾಗರಿಕರು ಸಂಚಾರದ ಕಟ್ಟುಪಾಡುಗಳನ್ನು ಪಾಲಿಸುವುದೊಂದೇ ಉತ್ತಮ ಪರಿಹಾರ ಎಂದು ಕಿವಿಮಾತು ಹೇಳಿದರು. ನಮ್ಮ ವಾಹನ ಚಾಲಕರು ಇಂಥ ಎಷ್ಟೋ ಉಪದೇಶಗಳನ್ನು ಆಲಿಸಿದ್ದಾರೆ. ಆದರೆ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವ ಮನೋಭಾವದಿಂದಾಗಿ ಸ್ಕೂಟರ್ ಗೆ ಸೈಕಲ್ ಅಡ್ಡ ಬರುತ್ತದೆ. ಅಡ್ಡ ಬಂದ ಸೈಕಲ್ಲಿಗೆ ಬಿಟಿಎಸ್ ಢಿಕ್ಕಿ ಹೊಡೆಯುತ್ತದೆ. ಆ ಏಟಿಗೆ ಯಾರೋ ಅಮಾಯಕ ತಲೆ ಕೊಡುತ್ತಾನೆ.

ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಅಪರಾಧ ತಡೆ ವಿಭಾಗ ಪೊಲೀಸರ ಮೂರು ಮುಖಗಳು. ಈ ಶಕ್ತಿಯ ಗರಿಷ್ಠ ಪ್ರಯೋಜನ ಪಡೆಯಲು ಈಚೀಚೆಗೆ ತಂತ್ರಜ್ಞಾನದ ನೆರವನ್ನು ಇಲಾಖೆ ಪಡೆಯುತ್ತಿದೆ. ಅನೇಕರಿಗೆ ತಿಳಿದಿರುವ ಹಾಗೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಕೆ, ಸಂಚಾರಿ ಪೊಲೀಸರಿಗೆ ಬ್ಲಾಕ್ ಬೆರಿ ನೀಡಲಾಗಿದೆ. ಇದಲ್ಲದೆ ಇನ್ನೂ ಹಲಕೆಲವು ತಾಂತ್ರಿಕ ಉಪಕರಣಗಳ ನೆರವನ್ನು ಪಡೆಯಲಾಗಿದೆ. ಅದರ ವಿವರಗಳನ್ನು ಹೇಳಲಾರೆನು ಎಂದು ಮಿರ್ಜಿ ನುಡಿದರು.

ಇಲಾಖೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ ಎಂಬ ಆರೋಪವನ್ನು ಮಿರ್ಜಿ ತಳ್ಳಿ ಹಾಕಿದರು. ಬೆಂಗಳೂರಿನ ಜನಸಂಖ್ಯೆ ಇಂದಿಗೆ 85 ಲಕ್ಷ. ನಗರದಲ್ಲಿ ಒಟ್ಟಾರೆ 20 ಸಾವಿರ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಆಗಾಗ ಸಿಬ್ಬಂದಿ ಕೊರತೆ ಉಂಟಾಗುತ್ತದೆ ನಿಜ. ಇದೀಗ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ನೇಮಕಾತಿ, ತರಬೇತಿ ಎಲ್ಲಾ ಮುಗಿದು ಹೊಸ ಸಿಬ್ಬಂದಿ ರಸ್ತೆಗಿಳಿಯುವ ಹೊತ್ತಿಗೆ ಮೂರು ವರ್ಷ ಬೇಕಾಗುತ್ತದೆ ಎಂದು ಕಮಿಷನರರ್ ವಿವರಿಸಿದರು.

ಬಾರುಗಳಲ್ಲಿ ಮಹಿಳೆಯರು ಉದ್ಯೋಗ ಮಾಡುವ ವಿಷಯ ಮತ್ತು ಅದರಿಂದ ತಲೆದೋರಿರುವ ಹಲವಾರು ಜಿಜ್ಞಾಸೆಗಳ ಬಗ್ಗೆ ಮಿರ್ಜಿ ತಮ್ಮ ನಿಲವುನ್ನು ವ್ಯಕ್ತಪಡಿಸಲು ನಿರಾಕರಿಸಿದರು. ನ್ಯಾಯಾಲಯದ ಆದೇಶ ಏನಿದೆಯೋ ಅದನ್ನು ಪಾಲಿಸುವುದಷ್ಟೇ ತಮ್ಮ ಇಲಾಖೆಯ ಕರ್ತವ್ಯ ಎಂದು ಮಾತು ಮುಗಿಸಿದರು ಜ್ಯೋತಿ ಪ್ರಕಾಶ್.

ಸಾರ್ವಜನಿಕರಿಗೆ ಸಂಪರ್ಕ ಮಾರ್ಗ
ಪೊಲೀಸ್ ಈಮೇಲ್ : [email protected]
ಪೊಲೀಸ್ ದೂರು : 100
ಬೆಂಗಳೂರು ಟ್ರಾಫಿಕ್ (ಹೊಯ್ಸಳ) : 103
ಅಗ್ನಿಶಾಮಕ : 101 ಅಥವಾ 2611
ವೈದ್ಯಕೀಯ : 102, 108, 112, 1298, 2611

English summary
Unless citizens abide by rules and cooperate with department, life in city shall continue to suffer with hoards of issues. Particularly, the traffic problem opinions Jyothi Prakash Mirji, Commissioner of police, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X