ಮಂತ್ರಿ ಪದವಿ ಆಮಿಷ, ಭಿನ್ನಮತೀಯರ ನಡೆ ಇನ್ನೂ ನಿಗೂಢ

ಕೃಷಿ ಸಚಿವ ಉಮೇಶ್ ಕತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, ಅಬಕಾರಿ ಸಚಿವ ಹಾಗು ಭಿನ್ನಮತದ ಕಿಡಿಹೊತ್ತಿಸಿದ್ದ ರೇಣುಕಾಚಾರ್ಯ 11 ಬಿಜೆಪಿ ಶಾಸಕರು ಮತ್ತು 5 ಪಕ್ಷೇತರರನ್ನು ಭೇಟಿ ಮಾಡಿ ಮಾತುಕತೆಗೆ ಕುಳಿತಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಕೆಲವರಿಗೆ ಸಂಪುಟ ದರ್ಜೆ ಸಚಿವರನ್ನಾಗಿ ಮಾಡುವ ಆಮಿಷ ಒಡ್ಡಲಾಗಿದೆ. ಉಳಿದವರಿಗೆ ನಿಗಮ, ಮಂಡಳಿ ನಿರ್ದೇಶಕ ಪಟ್ಟ. ಇಂಥ ಬಗೆಯ ಆಮಿಷಗಳು ಭಿನ್ನಮತೀಯರಿಗೆ ಹೊಸದೇನಲ್ಲ. ಭಿನ್ನಮತೀಯರು ತಮ್ಮ ನಡೆ ಬಗ್ಗೆ ಬಾಯಿ ಬಿಡದಿರುವುದು ಜೆಡಿಎಸ್ ಗೂ ನಿಗೂಢವಾಗಿ ಕಾಣುತ್ತಿದೆ. ಕಡೆಗೆ, ಇವರೆಲ್ಲರಿಗೆ ಬೇಕಾಗಿರುವುದು ಏನು?
ಓದಿ : ಯಡಿಯೂರಪ್ಪ ನಾಯಕತ್ವಕ್ಕೆ ಜೈ ಎಂದ ಭಿನ್ನರು?
ಅಮೆರಿಕಾದ ನ್ಯೂ ಜೆರ್ಸಿಗೆ ಪ್ರವಾಸಕ್ಕೆ ಹೋಗಬೇಕಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಶತಾಯಗತಾಯ ಭಿನ್ನಮತೀಯರನ್ನು ತಮ್ಮ ಬಿಗಿಮುಷ್ಠಿಯಿಂದ ಬಿಟ್ಟುಕೊಡುವಂಥವರಲ್ಲ. ಹಿಂದೆ ಗೋವಾದಲ್ಲಿ ಭಿನ್ನಮತೀಯರು ಯಾರ ಪರ ವಾಲಬೇಕು ಎಂಬ ಜಟಾಪಟಿಯಲ್ಲಿಯೂ ಜನಾರ್ದನ ರೆಡ್ಡಿ ವಿರುದ್ಧ ಕುಮಾರಸ್ವಾಮಿಯೇ ಯಶ ಕಂಡಿದ್ದರು. ನಂತರ ಅವರೆಲ್ಲ ಅನರ್ಹಗೊಂಡು, ಕಳೆದ ಅಕ್ಟೋಬರ್ 10 ಮತ್ತು 14ರಂದು ಎರಡು ಬಾರಿ ಐತಿಹಾಸಿಕ ವಿಶ್ವಾಸಮತ ಯಾಚನೆ ನಡೆದು ಬಿಜೆಪಿ ಜಯಶಾಲಿಯಾಗಿದ್ದು ಇತಿಹಾಸ. ಈಗ ಮತ್ತದೇ ಸನ್ನಿವೇಶ ರೂಪುಗೊಂಡಿದೆ.
ಪ್ರಧಾನಿ ಭೇಟಿ ಮಾಡಿದ ರಾಜ್ಯಪಾಲ : ಇವೆಲ್ಲ ಬೆಳವಣಿಗೆಗಳ ನಡುವೆ, ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇಂದು ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ, ಕರ್ನಾಟಕದ ಬೆಳವಣಿಗೆಗಳ ಬಗ್ಗೆ ವಿವರ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭೆ ಸ್ಪೀಕರ್ ರಿಂದ ಸಂವಿಧಾನದ ಉಲ್ಲಂಘನೆಯಾಗಿದ್ದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಹಿರಂಗವಾಗಿದೆ. ಮುಂದೆ ಏನು ಮಾಡುತ್ತೇನೆಂಬುದನ್ನು ಬೆಂಗಳೂರಿಗೆ ತೆರಳಿದ ನಂತರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಮೇ 16, ಸೋಮವಾರದಿಂದ ಆರಂಭವಾಗುತ್ತಿರುವ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಯಾವುದೇ ರೀತಿಯ ಅಡ್ಡಿಯನ್ನು ಮಾಡುವುದಿಲ್ಲ ಎಂದು ಹೇಳಿರುವ ರಾಜ್ಯಪಾಲರ ಮುಂದಿನ ನಡೆಯೇನು ಎಂಬ ಬಗ್ಗೆ ಅನೇಕ ಚರ್ಚೆಗಳಾಗುತ್ತಿವೆ. ಕಾಂಗ್ರೆಸ್ ಆಗ್ರಹಿಸುತ್ತಿರುವಂತೆ ಮತ್ತೆ ವಿಶ್ವಾಸಮತ ಯಾಚಿಸಲು ಯಡಿಯೂರಪ್ಪನವರನ್ನು ಕೋರುತ್ತಾರಾ? ಅಥವಾ ಕಾಂಗ್ರೆಸ್ ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೆಯೇ ನಡೆದುಕೊಳ್ಳುತ್ತಾರಾ? ಕಾದು ನೋಡಬೇಕು.












Click it and Unblock the Notifications