ಕನ್ಯಾ ಸೆರೆ ಬಿಡಿಸುವ ಕಿಲಾಡಿ ಪೋಸ್ಟ್ ಮ್ಯಾನ್ ಸೆರೆ

ಇವ ಕೊರಟೆಗೆರೆಯಲ್ಲಿ ಪೋಸ್ಟ್ ಮ್ಯಾನ್ ಆಗಿದ್ದವ. ಮೊದಲು ಗಾಯತ್ರಿ ಎಂಬುವವನ್ನು ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ದಯಪಾಲಿಸಿದ್ದ. ಇಲಾಖೆಯ ಹಣ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಅಂಚೆಯವರು ಇವನನ್ನು ಹೊರಗಟ್ಟಿದರು. ಆಗ ಅದ್ಯಾವ ಖಯಾಲಿಗೆ ಬಿದ್ದನೋ ದಿಢೀರನೆ ಕೃಷಿ ಅಧಿಕಾರಿ ಅವತಾರವೆತ್ತಿ ವಧು ಅನ್ವೇಷಣೆಗೆ ಇಳಿದುಬಿಟ್ಟ.
ಆರ್. ಸಿದ್ಧಲಿಂಗ ಪ್ರಸಾದ್ (42) ಗೆ ಇನ್ನೂ ಹಲವು ಹೆಸರುಗಳಿವೆ: ಮೋಹನ ಕುಮಾರ, ರವಿ ಕುಮಾರ, ಸೋಮಶೇಖರ ಮಂಜುನಾಥ್, ಪ್ರಕಾಶ್ ಕುಮಾರ್, ಸದ್ಯಕ್ಕೆ ಇಷ್ಟೇ ತಿಳಿದುಬಂದಿರುವುದು. ಕಾರವಾರ ಪೊಲೀಸರು ಇವನನ್ನು ಇತ್ತೀಚೆಗೆ ಬಂಧಿಸಿ ಮೊಬೈಲ್ ಫೋನ್, 9 ಸಿಮ್ ಕಾರ್ಡ್ ಗಳು, ಒಂದಷ್ಟು ನಗ, ನಾಣ್ಯ ವಶಪಡಿಸಿಕೊಂಡಿದ್ದಾರೆ.
'ತಾನೊಬ್ಬ ಅಧಿಕಾರಿ. ವಧು ಬೇಕಾಗಿದೆ. ಯಾವುದೇ ಜಾತಿಯಾದರೂ ಪರವಾಗಿಲ್ಲ' ಎಂಬ ಒಕ್ಕಣೆಯ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ಕಾರ್ಯಾಚರಣೆಗೆ ಇಳಿಯುತ್ತಿದ್ದ. ರಾಜ್ಯಾದ್ಯಂತ ಕಪಟ ನಾಟಕ ಶುರುವಿಟ್ಟುಕೊಂಡಿದ್ದ ಸಿದ್ದಲಿಂಗ 20ಕ್ಕೂ ಹೆಚ್ಚು ಯುವತಿಯರ ಬಾಳು ಹಾಳುಮಾಡಿದ್ದಾನೆ. ಸಿದ್ಧಲಿಂಗನ ಮಾತು ನಂಬಿ ಬಳ್ಳಾರಿಯ ಉಷಾ ತಾವು ಕಷ್ಟಪಟ್ಟು ಕೂಡಿಟ್ಟಿದ್ದ 40 ಸಾವಿರ ರುಪಾಯಿ, 34 ಗ್ರಾಂ ಚಿನ್ನಾಭರಣವನ್ನು ಇವನಿಗೆ ಧಾರೆಯೆರೆದು ಮದುವೆಗೆ ಮನಸ್ಸು ಮಾಡಿದ್ದರು. ಇಂತಹ ಉಷಾಗಳು ಹಲವಾರು.
ಈ ರೀತಿ ಸಕಲವೂ ಧಾರೆ ಎರೆದ ಮೇಲೆ ಮದ್ವೆ ಯಾವಾಗ ಎಂದು ಕೇಳಿದರೆ ಈಗ್ಲೇ ಬಂದೆ, ಮದುವೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಪಂಗನಾಮ ಇಕ್ಕುತ್ತಿದ್ದ. ಕನ್ಯಾ ಮಣಿಗಳು ಕೊಟ್ಟ ಹಣ, ಆಭರಣಗಳಿಂದ ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಭೋಗ ಜೀವನ ನಡೆಸುತ್ತಿದ್ದ.
ಶೋಚನೀಯವೆಂದರೆ ಇಂತಹ ದುರುಳನಿಗೆ ಮರುಳಾಗುವವರ ಸಂಖ್ಯೆಗೇನೂಕಮ್ಮಿಯಿಲ್ಲ. ಪೊಲೀಸ್ ಲಾಕಪ್ ನಲ್ಲಿದ್ದರೂ ಇವನ ಮೊಬೈಲ್ ಗೆ ನೋರೆಂಟು ಕರೆಗಳು. ನಮ್ಮಲ್ಲಿ ಒಂದು ಹೆಣ್ಣು ಇದೆ. ಬಂದು ನೋಡಿಕೊಂಡು ಹೋಗಿ ಅಂತ ಸಿದ್ಲಿಂಗುಗೆ ಡಿಮ್ಯಾಡಪ್ಪೋ ಡಿಮ್ಯಾಂಡು. ರಿಮ್ಯಾಂಡ್ ನಲ್ಲಿದ್ದರೂ ಭಾರಿ ಡಿಮ್ಯಾಂಡ್ ವರ ಅವತಾರಿಗೆ. ಸಿದ್ಲಿಂಗು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇ ತಡ ಯುವತಿಯರು ಠಾಣೆಗೆ ಎಡತಾಕುತ್ತಿದ್ದಾರೆ. ಬಂಧನವಾದ ಮೊದಲ ದಿನವೇ ಆರು ಪ್ರಕರಣಗಳು ಇವನ ವಿರುದ್ಧ ದಾಖಲಾಗಿವೆ. ಇನ್ಸ್ ಪೆಕ್ಟರ್ ಲೋಕೇಶ್ವರ್ ಸುಸ್ತೋ ಸುಸ್ತು.











Click it and Unblock the Notifications