ಬಾಬಾ ಸಾವಿಗೆ ಆಸ್ಪತ್ರೆ ವಾಸ್ತು ದೋಷ ಕಾರಣ

ಬಡವರಿಗೆ ಕಷ್ಟಕಾಲದಲ್ಲಿ ನೆರವಾಗಲೆಂದು ಬಾಬಾ ಅವರು 1991ರಲ್ಲಿ 80 ಎಕರೆ ಸುವಿಶಾಲ ಪ್ರದೇಶದಲ್ಲಿ 220 ಹಾಸಿಗೆಯುಳ್ಳ ಶ್ರೀ ಸತ್ಯ ಸಾಯಿಬಾಬಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SSSIHMS) ನಿರ್ಮಿಸಿದರು.
'ಈ ಆಸ್ಪತ್ರೆಗೆ ವಾಸ್ತು ದೋಷವಿದೆ ಎಂದು ಆರಂಭದಿಂದಲೂ ನಮಗೆ ಅನಿಸುತ್ತಿದೆ. ಅದು ಬಾಬಾ ಸಾವಿನೊಂದಿಗೆ ಮತ್ತೆ ರುಜುವಾತಾಗಿದೆ. ಬೇರೆ ಇನ್ಯಾವುದಾದರೂ ಆಸ್ಪತ್ರೆಗೆ ಅಥವಾ ಬೆಂಗಳೂರಿನಲ್ಲಿ ಅವರೇ ನಿರ್ಮಿಸಿರುವ ವೈಟ್ ಫೀಲ್ಡ್ ಆಸ್ಪತ್ರೆಗಾದರೂ ವರ್ಗಾಯಿಸುವಂತೆ ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯ ತಂಡವನ್ನು ಈ ಒಂದು ತಿಂಗಳಲ್ಲಿ ಪರಿಪರಿಯಾಗಿ ಕೇಳಿಕೊಂಡೆವು. ಆದರೆ ಎಲ್ಲ ನಿಷ್ಫಲವಾಗಿದೆ' ಬಾಬಾ ಕುಟುಂಬದ ಆಪ್ತ ನೆಂಟರೊಬ್ಬರು ಹೇಳಿದ್ದಾರೆ.
ಬಾಬಾ ಭಾನುವಾರ ಬೆಳಗ್ಗೆ 7.40ಕ್ಕೆ ಇಹಲೋಕ ತ್ಯಜಿಸುತ್ತಿದ್ದಂತೆ ಅವರನ್ನು ಬಂದು ನೋಡಿಕೊಂಡು ಹೋಗಲು ಬಾಬಾ ಬಂಧುವರ್ಗಕ್ಕೆ ವೈದ್ಯ ತಂಡ ಸೂಚಿಸಿತ್ತು. 'ವಿಧಿಯಿಲ್ಲದೆ ನಾವು ಇಲ್ಲಿಗೆ ಬಂದಿದ್ದೇವೆ. ಆಸ್ಪತ್ರೆಯಲ್ಲಿ ಅನೇಕ ನಕಾರಾತ್ಮಕ ಅಂಶಗಳಿವೆ. ಆದರೆ ನಮ್ಮ ಮಾತಿಗೆ ಯಾರೂ ಕಿವಿಗೊಡುತ್ತಿಲ್ಲ' ಎಂದು ಆ ನೆಂಟರು ಅಲವತ್ತುಕೊಂಡರು.
ವಾಸ್ತು ದೋಷದ ಇತಿಹಾಸ: ಸಾಯಿಬಾಬಾ ಹಿರಿಯಣ್ಣ ರತ್ನಂ ಶೇಷ ರಾಜು 1984ರಲ್ಲಿ ಸಾವಿಗೀಡಾದರು. ಸಾಯಿಬಾಬಾ ಸೋದರ ಸಂಬಂಧಿಗಳ ಪೈಕಿ ಎರಡನೆಯವರಾದ ವೆಂಕಮ್ಮ1993ರಲ್ಲಿ ಅಸುನೀಗಿದರು. ಬಾಬಾ ಅವರ ಎರಡನೆಯ ಸೋದರಿ ಪಾರ್ವತಮ್ಮ ನಾಲ್ಕು ವರ್ಷಗಳ ಬಳಿಕ ಮೃತಪಟ್ಟರು. 2003ರಲ್ಲಿ ಬಾಬಾ ತಮ್ಮಜಾನಕಿರಾಮಯ್ಯ ಸಹ ನಿಧನರಾದರು. ಇವರೆಲ್ಲ ಇದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವುದು ಶೋಚನೀಯ. ಇಷ್ಟೇ ಅಲ್ಲ. ಬಾಬಾ ಅವರ ದೂರದ ಸಂಬಂಧಿಗಳ ಪೈಕಿ ಇನ್ನೂ ಅನೇಕ ಮಂದಿ ಇಲ್ಲಿ ಸಾವಿಗೀಡಾಗಿದ್ದಾರೆ.












Click it and Unblock the Notifications