ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ನಂ.1

ಇದರಲ್ಲಿ ಸಂಶಯವೇ ಇಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕದ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಬೆಳಗಾವಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾರದ್ವಾಜ್ ಪತ್ರಕರ್ತರಿಗೆ ತಿಳಿಸಿದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರದ ವಿರುದ್ಧ ಸಮಯ ಸಿಕ್ಕಾಗಲೆಲ್ಲ ಮಾತಿನ ಚಾಟಿ ಬೀಸುವುದನ್ನು ತಪ್ಪಿಸಿಕೊಳ್ಳದ ಭಾರದ್ವಾಜ್, ಸಿಇಸಿಯೇ ತನ್ನ ವರದಿಯಲ್ಲಿ ಇಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ ಎಂದು ತಿಳಿಸಿದೆ ಎಂದು ನುಡಿದರು.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಸಿಇಸಿ ಸಲ್ಲಿಸಿರುವ ವರದಿಯನ್ನು ತರಿಸಿಕೊಂಡ ಓದಲಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಯನ್ನು ಭಾರದ್ವಾಜ್ ತರಾಟೆಗೆ ತೆಗೆದುಕೊಂಡರು. ಸಿಇಸಿ ವರದಿ ಸಲ್ಲಿಸಿದ ನಂತರ, ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಸಹೋದರರ ಪಾಲಿಲ್ಲ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಳುವಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿಸಿದ್ದರು.
ಸಿಇಸಿ ಸಲ್ಲಿಸಿರುವ ವರದಿಯ ಮೇಲೆ ವಿಚಾರಣೆಯನ್ನು ಏಪ್ರಿಲ್ 22ರಂದು ಸುಪ್ರೀಂ ಕೋರ್ಟ್ ನಡೆಸಲಿದೆ. ಇದರಲ್ಲಿ ರಾಜ್ಯದ 64 ಗಣಿ ಕಂಪನಿಗಳನ್ನು ಮುಚ್ಚಬೇಕೆಂದು ಸಿಇಸಿ ಶಿಫಾರಸು ಮಾಡಿದೆ ಮತ್ತು ಈ ಅಕ್ರಮದಿಂದ ಆಗಿರುವ ನಷ್ಟವನ್ನು ಆಯಾ ಕಂಪನಿಗಳೇ ಭರಿಸಬೇಕೆಂದು ಮನವಿ ಮಾಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ ಅವರು ಇನ್ನೆರಡು ತಿಂಗಳಲ್ಲಿ 2ನೇ ವರದಿಯನ್ನು ಸರಕಾರಕ್ಕೆ ನೀಡುವುದಾಗಿ ನುಡಿದಿದ್ದಾರೆ.











Click it and Unblock the Notifications