ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳದಿ ಟಿವಿಗಳ ವಿರುದ್ಧ ಕೆಂಪಗಾದ ಯಡ್ಡಿ

By Prasad
|
Google Oneindia Kannada News

Yellow Journalism in Karnataka, CM concerned
ಹುಬ್ಬಳ್ಳಿ, ಮಾ. 13 : ಕರ್ನಾಟಕದ ಟಿವಿ ಚಾನಲ್ಲುಗಳಲ್ಲಿ ಹಳದಿ ಪತ್ರಿಕೋದ್ಯಮ ದಿನೇದಿನೆ ಆತಂಕಕಾರಿಯಾಗಿ ಬೆಳೆಯುತ್ತಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅನಾರೋಗ್ಯಕರ ಬೆಳವಣಿಗೆಯನ್ನು ಹತೋಟಿಯಲ್ಲಿಡಲು ಲಕ್ಷ್ಮಣ ರೇಖೆಯನ್ನು ತಾವೇ ಎಳೆದುಕೊಳ್ಳುವ ಅಗತ್ಯವಿದೆ ಎಂದು ಮಾಧ್ಯಮಗಳಿಗೆ ಅವರು ಕರೆ ನೀಡಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾರಂಗ ಜವಾಬ್ದಾರಿಯಿಂದ ಮತ್ತು ಸಂವೇದನೆಯಿಂದ ವರ್ತಿಸಬೇಕು. ವರದಿಗಳನ್ನು ಖಚಿತ ಪಡಿಸಿಕೊಂಡು ಅತ್ಯಂತ ಜವಾಬ್ದಾರಿಯಿಂದ ಪ್ರಕಟಿಸಬೇಕು ಮತ್ತು ಗಾಳಿಪಟ ಹಾರಿಸಬಾರದು. ಟಿವಿ ಚಾನಲ್ಲುಗಳು ಟಿಆರ್ಪಿ ಹೆಚ್ಚಿಸಿಕೊಳ್ಳುವುದ್ದಕ್ಕೋಸ್ಕರ ಸತ್ಯಕ್ಕೆ ದೂರವಾದ ವರದಿಗಳನ್ನು ಪ್ರಕಟಿಸಬಾರದು ಎಂದು ಅವರು ಕಿವಿಮಾತು ಹೇಳಿದರು.

ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಟಿವಿ ಚಾನಲ್ಲುಗಳನ್ನು ಗುರಿಯಾಗಿಟ್ಟುಕೊಂಡು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದರು. ಕೆಲ ಟಿವಿ ಚಾನಲ್ಲುಗಳು ಪ್ರಕಟಿಸುವ ಹೆಚ್ಚಿನ ವರದಿಗಳು ಸ್ವಹಿತಾಸಕ್ತಿಯಿಂದ ಕೂಡಿರುತ್ತವೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ವಾಕ್ ಸ್ವಾತಂತ್ರ್ಯವನ್ನು ಗೌರವಿಸುವ ಸರಕಾರ ಮತ್ತು ಪತ್ರಿಕೋದ್ಯಮದ ನಡುವಿನ ಸಂಬಂಧ ಆರೋಗ್ಯಕರವಾಗಿರಬೇಕು ಮತ್ತು ರಚನಾತ್ಮಕವಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಪತ್ರಿಕೋದ್ಯಮದ ಅಭಿವೃದ್ಧಿ ಮತ್ತು ಒಳಿತಿಗಾಗಿ ತಮ್ಮ ಸರಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಟಿವಿ ಚಾನಲ್ಲುಗಳು ಕೂಡ ತಮ್ಮ ಸರಕಾರದ ಚಿಂತನೆಗೆ ಅನುಗುಣವಾಗಿ ಸ್ಪಂದಿಸುತ್ತಾರೆಂಬ ನಿರೀಕ್ಷೆ ತಮಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ತಮ್ಮ ಸರಕಾರ ಒಂದು ಸಮಿತಿಯನ್ನು ರಚಿಸಿರುವುದಾಗಿ, ಆ ಸಮಿತಿ ಪತ್ರಕರ್ತರ ಯೋಗಕ್ಷೇಮವನ್ನು ಕಾಪಾಡುವ ಉದ್ದೇಶದಿಂದ ಚಿಂತನೆಯನ್ನು ನಡೆಸಿದೆ ಎಂದು ಯಡಿಯೂರಪ್ಪ ಹೇಳಿದರು. ತಮ್ಮ ನಿಲುವು ಈ ರೀತಿ ಇದ್ದಾಗ್ಯೂ ಕೆಲವು ಟಿವಿ ವಾಹಿನಿಗಳು ಗೊಂದಲ ಉಂಟು ಮಾಡುವಂಥ ವರದಿಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸುತ್ತಿರುವ ಬಗ್ಗೆ ಅವರು ಖಿನ್ನತೆ ವ್ಯಕ್ತಪಡಿಸಿದರು.

ಸಮಾರೋಪ : ಹುಬ್ಬಳ್ಳಿಯ ಕಾರ್ಯಕ್ರಮದ ನಂತರ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದ ತಾಣಕ್ಕೆ ಯಡಿಯೂರಪ್ಪ ಸಂಜೆ ಆಗಮಿಸಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವ ಕನ್ನಡ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ಆಶಯ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮಾದರಿಯ ಒಂದು ಸುಸಜ್ಜಿತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ನಿರ್ಮಾಣ ಮಾಡಬೇಕೆಂದು ಚಿಂತನೆಯನ್ನು ತೇಲಿಬಿಟ್ಟರು.

English summary
Karnataka Chief Minister BS Yeddyurappa sore with increasing extent of yellow journalism in the state. He has adviced the TV channels and journalists should draw lakshman rekha on their own.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X