ಸೋಸಲೆ ಮಠದ ಶ್ರೀಗೆ ಜಾಮೀನು, ಕೇಸ್ ಹಿಸ್ಟರಿ

ಕಡಪದ ಪೊಲೀಸರು ವಿಚಾರಣೆ ಸಲುವಾಗಿ ಸ್ವಾಮೀಜಿ ಅವರನ್ನು ನೆನ್ನೆ ದಿವಸ ಕರೆದೊಯ್ದಿದ್ದರು. ಸ್ಥಿರಾಸ್ಥಿ ಪರಭಾರೆ ವಿಚಾರದಲ್ಲಿ ಉಂಟಾಗಿರುವ ಈ ಗೊಂದಲ, ಮಠದ ಆಂತರಿಕ ವಿಷಯವಾಗಿದ್ದು, ಸುಮ್ಮನೆ ಇದಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಮುರಳಿ ಅವರು ವಿಷಾದಿಸಿದರು. ಆದರೆ, ವ್ಯಾಸರಾಜ ಸೇವಾ ಸಮಿತಿ ನೀಡಿರುವ ಹೇಳಿಕೆ ಬೇರೆಯದೆ ಕಥೆ ಹೇಳುತ್ತದೆ. ಸ್ವಾಮೀಜಿ ಅವರ ಪ್ರಸ್ತುತ ಚೆಕ್ ಬೌನ್ಸ್ ಪ್ರಕರಣದ ಹಿಂದಿನ ಕಥೆಯ ಸಂಪೂರ್ಣ ವಿವರಗಳ ಸಾರಾಂಶ ಇಲ್ಲಿ ನೀಡಲಾಗಿದೆ.
* ಮನೋಹರ ಸ್ವಾಮೀಜಿ ಅವರು ಈಗಾಗಲೇ ಹಲವಾರು ವಂಚನೆ ಹಾಗೂ ಮೋಸದ ಪ್ರಕರಣಗಳಲ್ಲಿ ಆರೋಪಿಯಾಗಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.
* ವ್ಯಾಸರಾಜ ಸೇವಾ ಸಮಿತಿ ವತಿಯಿಂದ ಮಠದ ಭಕ್ತರು ಸ್ವಾಮೀಜಿ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದು, ಪರಭಾರೆಯಾಗಿರುವ ಸ್ಥಿತ ಮತ್ತು ಚರ ಆಸ್ತಿಗಳ ವಾಪಾಸ್ಸು ಪಡೆಯುವ ವಿಷಯದಲ್ಲಿ ನಿರತರಾಗಿದ್ದಾರೆ.
* ತಿರುಮಲದಲ್ಲಿರುವ ಮಠದ ಆಸ್ತಿಯನ್ನು ಟಿಟಿಡಿ ಷರತ್ತುಗಳಿಗೆ ವಿರುದ್ಧವಾಗಿ ಶ್ರೀಹರಿ ಎನ್ನುವವರಿಗೆ 2005ರಲ್ಲಿ ಮೂವತ್ತು ವರ್ಷಗಳ ಕಾಲದ ಬೋಗ್ಯಕ್ಕೆ ನೀಡಲಾಗಿತ್ತು.
* ಇದೇ ಆಸ್ತಿಯನ್ನು 2009ರಲ್ಲಿ ಕಡಪಾದ ಸಂಪತ್ ಕುಮಾರ್ ಜೈನ್ ಎಂಬುವವರಿಗೆ 2.6 ಕೋಟಿ ರುಪಾಯಿಗೆ ಬೋಗ್ಯಕ್ಕೆ ಕೊಟ್ಟು 35 ಲಕ್ಷ ರುಪಾಯಿ ಮುಂಗಡವಾಗಿ ಪಡೆದಿದ್ದರು.
* ಇತ್ತ ಬೋಗ್ಯಕ್ಕೆ ಪಡೆದ ಆಸ್ತಿಯನ್ನು ಪಡೆದ ಶ್ರೀಹರಿ ಅವರು ಆಸ್ತಿಯನ್ನು ಬಿಟ್ಟುಕೊಡದೆ ಪಟ್ಟು ಹಿಡಿದು ಕುಳಿತುಬಿಟ್ಟರು. ಈ ಸಂದರ್ಭದಲ್ಲಿ ಸಂಪತ್ ಕುಮಾರ್ ಜೈನ್ ಗೆ ಮತ್ತೆ 70 ಲಕ್ಷದ ಚೆಕ್ ಕೊಡುವುದಾಗಿ ಹೇಳಿ ಹಲವು ಚೆಕ್ ಗಳನ್ನು ನೀಡಿದ್ದರು.
* ಆದರೆ, ಸ್ವಾಮೀಜಿ ನೀಡಿದ ಚೆಕ್ ಗಳೆಲ್ಲ ನಗದಾಗದೆ ವಾಪಸ್ ಆಗಿದ್ದರಿಂದ ಕಡಪ ನ್ಯಾಯಾಲಯದಲ್ಲಿ (SCT 135/2010) ಪ್ರಕರಣ ದಾಖಲಾಗಿತ್ತು. ಕೋರ್ಟ್ ಗೆ ಹಾಜರಾಗದ ಸ್ವಾಮೀಜಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು. ಅದರಂತೆ ಅವರ ಬಂಧನ, ಜಾಮೀನು ಕ್ರಿಯೆ ನಡೆದಿದೆ.
ಇದಲ್ಲದೆ ತಿರುಪತಿಯ ಗೋವಿಂದರಾಜಪಟ್ಟಣ, ಮಧುರೆ, ಶ್ರೀರಂಗಂ, ಬೆಂಗಳೂರು ನ್ಯಾಯಾಲಯದಲ್ಲಿ ಇದೇ ರೀತಿ ಹಲವಾರು ಮೊಕದ್ದಮೆಗಳು ಸ್ವಾಮೀಜಿ ವಿರುದ್ಧ ದಾಖಲಾಗಿದೆ. ಮುಜರಾಯಿ ಇಲಾಖೆ ನಡೆಸುತ್ತಿರುವ ವಿಚಾರಣೆ ಅಂತಿಮ ಹಂತದಲ್ಲಿದೆ. ಮಠದ ಭಕ್ತ ಸಮೂಹ ಸ್ವಾಮೀಜಿ ಅವರ ಪದತ್ಯಾಗಕ್ಕೆ ಆಗ್ರಹಿಸಿದೆ. ಮಠಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸಬೇಕೆಂದು ಕೋರ್ಟ್ ಮೊರೆ ಹೊಕ್ಕಿದ್ದಾರೆ. ವ್ಯಾಸರಾಜ ಸೇವಾ ಸಮಿತಿಯ ವತಿಯಿಂದ ಮಠಕ್ಕೆ ಸೇರಿದ ದೇವರ ವಿಗ್ರಹಗಳೂ, ಒಡವೆ ಮತ್ತು ಇನ್ನಿತರ ಪೂಜಾ ಸಾಮಾಗ್ರಿಗಳ ಭದ್ರತೆಗಾಗಿ ಬಸವನ ಗುಡಿ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ದಾರೆ.












Click it and Unblock the Notifications