ಪಾಕ್ ಜಾಹೀರಾತಿನಲ್ಲಿ ಭಾರತದ ನೌಕಾ ಚಿತ್ರ

ಅಮಾನ್-11 ಎಂಬ ಹೆಸರಿನಲ್ಲಿ ಸಮರಾಭ್ಯಾಸ ಕುರಿತು 'ದಿ ನೇಶನ್' ಹಾಗೂ 'ನವಾ-ಇ-ವಕ್' ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಒಂದು ಪುಟದ ಜಾಹೀರಾತಿನಲ್ಲಿ ಭಾರತೀಯ ನೌಕಾ ಪಡೆಯ ದಿಲ್ಲಿ, ಗೋದಾವರಿ ಹಾಗೂ ತಲ್ವಾರ್ ಕ್ಲಾಸ್ ಯುದ್ಧನೌಕೆಗಳ ಚಿತ್ರವನ್ನು ಬಳಸಲಾಗಿದೆ. ಜಾಹೀರಾತಿನಲ್ಲಿ 'ಶಾಂತಿಗಾಗಿ ಜತೆಯಾಗಿದ್ದೇವೆ' ಶೀರ್ಷಿಕೆಯನ್ನು ನೀಡಲಾಗಿದ್ದು, ಅಮೆರಿಕದ ಯುದ್ಧನೌಕೆಯ ಚಿತ್ರವೂ ಜೊತೆಗಿದೆ.
ಸುಮಾರು 39 ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಬೃಹತ್ ಜಂಟಿ ಸಮರಾಭ್ಯಾಸ ಅರೇಬಿಯನ್ ಸಮುದ್ರದಲ್ಲಿ ನಡೆಯಲಿದೆ. ಉಪಖಂಡದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಯುದ್ಧನೌಕೆಗಳು, ಯುದ್ಧವಿಮಾನಗಳು, ವಿಶೇಷ ಪಡೆಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದೆ. ಆದರೆ, ಪಾಕಿಸ್ತಾನ ಇದುವರೆಗೆ ಭಾರತವನ್ನು ಆಹ್ವಾನಿಸಿಲ್ಲ.
ಪಾಕ್ ಜಾಹೀರಾತು ಎಡವಟ್ಟುಗಳು : ಭಾರತ ಹಾಗೂ ಪಾಕಿಸ್ತಾನಗಳ ಸರ್ಕಾರಿ ಸಂಸ್ಥೆಗಳ ಜಾಹೀರಾತಿನಲ್ಲಿ ಈ ರೀತಿ ಎದುರಾಳಿ ರಾಷ್ಟ್ರಗಳ ನೌಕೆ, ಯುದ್ಧವಿಮಾನ ಹಾಗೂ ಇತರ ಪ್ರಮುಖ ಚರಾಸ್ತಿಗಳನ್ನು ತೋರಿಸಿ ಮುಜುಗರಕ್ಕೀಡಾಗಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸ್ ಪಡೆ ಜಾಹೀರಾತಿನಲ್ಲಿ ಭಾರತದ ಪಂಜಾಬ್ ಪೊಲೀಸರ ಚಿಹ್ನೆಯನ್ನು ಬಳಲಾಗಿತ್ತು. ಭಾರತ ಸರ್ಕಾರದ ಜಾಹೀರಾತಿನಲ್ಲಿ ಒಮ್ಮೆ ಪ್ರಧಾನಿ ಮನಮೋಹನ್ ಸಿಂಗ್, ಕಪಿಲ್ ದೇವ್ ಜೊತೆ ಪಾಕ್ ವಾಯುಪಡೆ ಮುಖ್ಯಸ್ಥ ತನ್ವೀರ್ ಅಹಮದ್ ಭಾವಚಿತ್ರ ಸೇರಿಸಿ ಪ್ರಕಟಿಸಲಾಗಿತ್ತು.












Click it and Unblock the Notifications