ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರ ಸ್ವಂತ ಆಸ್ತಿ ಅಲ್ಲ, ಮಾತೃಭೂಮಿ : ಮೋಹನ್ ಜೀ

By Mahesh
|
Google Oneindia Kannada News

Mohan Bhagwat at Tenkila, Puttur
ಪುತ್ತೂರು, ಮಾ. 7: ಇಲ್ಲಿನ ತೆಂಕಿಲದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಪೂರ್ವಭಾವಿಯಾಗಿ ಭಾನುವಾರ ಬೌದ್ಧಿಕ್ ಕಾರ್ಯಕ್ರಮ ನಡೆಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ಜೀ ಭಾಗ್ವತ್ ಅವರು ರಾಷ್ಟ್ರದ ಸಮಸ್ಯೆ ದೊಡ್ಡದಲ್ಲ, ನಾವು ದುರ್ಬಲರಾದಾಗ ಹಾಗನಿಸುತ್ತದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಕಾಶ್ಮೀರ ವಿಭಜನೆ, ಭ್ರಷ್ಟಾಚಾರ, ಅಲ್ಪಸಂಖ್ಯಾತರು ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ ಮೋಹನ್ ಭಾಗ್ವತ್ ಅವರ ಭಾಷಣದ ಸಾರಾಂಶ ಇಂತಿದೆ: ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಎಲ್ಲಾ ದಾಖಲೆಗಳನ್ನು ಅಂದಿನ ರಾಜ ಭಾರತ ಸರಕಾರಕ್ಕೆ ನೀಡಿದ್ದರೂ ಇದನ್ನು ಈಗಲೂ ಭಾರತದ ಅಂಗವಾಗಿ ಉಳಿಸಿಕೊಳ್ಳಲು ಆಗದಿರುವುದು ವಿಚಿತ್ರವಲ್ಲವೇ?ಸೇನೆಯನ್ನು ತಡೆದು ವಿಶ್ವಸಂಸ್ಥೆಗೆ ಕಾಶ್ಮೀರ ವಿಚಾರವನ್ನು ಒಯ್ದೆವು. ಇಂದು ನಮ್ಮ ದೇಶದ ಅಖಂಡತೆಯ ವಿಚಾರವನ್ನು ಬೇರೆ ದೇಶಗಳು ಬಗೆಹರಿಸುವಂತ ಪರಿಸ್ಥಿತಿ ನಿರ್ಮಾಣಗೊಂಡಿರುವುದು ದೇಶದ ಜನರ ದೌರ್ಭಾಗ್ಯ .

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹಿಂದುಗಳು, ಸಿಕ್ಖರು, ಬೌದ್ಧರು, ರಾಷ್ಟ್ರೀಯವಾದಿ ಮುಸ್ಲಿಮರು ಸಾರಿ ಹೇಳುತ್ತಿದ್ದಾರೆ. ಕಾಶ್ಮೀರದ ಉಳಿದ ಭಾಗಗಳನ್ನು ರಾಷ್ಟ್ರದೊಳಕ್ಕೆ ಸೇರಿಸುವುದು ಯಾವಾಗ ಎಂದು ಚರ್ಚೆಯಾಗಬೇಕಿತ್ತು. ಆದರೀಗ ಸ್ವಾಯತ್ತತೆಯ ಬಗ್ಗೆ ಮಾತನಾಡುವ ಅಲ್ಪಸಂಖ್ಯಾತ ಪ್ರತ್ಯೇಕತಾವಾದಿಗಳ ಜೊತೆ ನಮ್ಮ ಸರಕಾರಗಳು ಮಾತುಕತೆ ನಡೆಸುತ್ತಿವೆ. ಕಾಶ್ಮೀರದಲ್ಲಿ ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡು ನಿರಾಶ್ರಿತರಾದ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಬಗೆಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅಖಂಡತೆ ಕುರಿತ ಕೋಟ್ಯಂತರ ಭಾರತೀಯರ ಭಾವನೆಯನ್ನು ಸರಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಅವರು ವಿಪರ್ಯಾಸದತ್ತ ಬೊಟ್ಟು ಮಾಡಿದರು.

ಇದು ನಮ್ಮ ಮಾತೃಭೂಮಿ ಎಂಬ ಭಾವ ಕೆಲವರಲ್ಲಿಲ್ಲ. ರಾಷ್ಟ್ರದ ಅಖಂಡತೆಯ ಬಗೆಗೇ ಸ್ಪಷ್ಟತೆಯಿಲ್ಲ. ಮತೀಯ ನೆಲೆಯಲ್ಲಿ ದೇಶವಿಭಜನೆ ನಡೆದರೂ ಸಮಸ್ಯೆಗೆ ಉತ್ತರ ಸಿಗಲಿಲ್ಲ.ವಿಶ್ವದಲ್ಲಿ ಯಾವುದೇ ರಾಷ್ಟ್ರವೊಂದರ ಜನತೆ ತಮ್ಮ ದೇಶದ ಅಖಂಡತೆಯ ಕುರಿತಂತೆ ಅಸ್ಪಷ್ಟತೆ ಹೊಂದಲಾಗದು.ದೇಶದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದ್ದು ಬಹುಸಂಖ್ಯಾತರನ್ನು ಭಯೋತ್ಪಾದಕರಂತೆ ಬಿಂಬಿಸುವ ಕಾರ್ಯ ನಡೆಯುತ್ತಿದೆ .ಆರೆಸ್ಸೆಸ್ಸನ್ನು ಮುರಿಯಲು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಾಚೀನ ಸಂಸ್ಕಾರಗಳ ಪುನರುಜ್ಜೀವನದೊಂದಿಗೆ ಸಂಘ ರಾಷ್ಟ್ರವನ್ನು ಪರಮವೈಭವದತ್ತ ಒಯ್ಯಲು ದುಡಿಯುತ್ತಿದೆ ಎಂದರು.

ರಾಷ್ಟ್ರ ಸ್ವಂತ ಆಸ್ತಿ ಅಲ್ಲ, ಮಾತೃಭೂಮಿ: ಭಾತರದ ಅಖಂಡತೆಯನ್ನು ಮರೆತಿರುವ ಸರಕಾರಗಳು ಮಾತೃಭೂಮಿಯನ್ನು ಸ್ವಂತ ಆಸ್ತಿಯೋ ಎಂಬಂತೆ ಪರಿಗಣಿಸುತ್ತಿವೆ.ಮಾಜಿ ರಾಷ್ಟ್ರಪತಿ ಡಾ.ಕಲಾಂ ಹೇಳಿರುವಂತೆ 1000ವರ್ಷಗಳಿಂದ ಶಕ್ತಿಯ ಆರಾಧನೆಯನ್ನು ನಾವು ಕೈ ಬಿಟ್ಟಿರುವುದೇ ಸಮಸ್ಯೆಗಳ ಮೂಲ.ರವೀಂದ್ರನಾಥ ಠಾಗೋರರು 'ಸ್ವದೇಶಿ ಸಮಾಜ"ದಲ್ಲಿ , ಹಿಂದು ಮುಸ್ಲಿಮರು ಹೊಡೆದಾಡುತ್ತಲೇ ಇರುತ್ತಾರೆ ಎಂದೆಣಿಸಬೇಡಿ. ಸೌಹಾರ್ದ ಬಾಳ್ವೆ ನಡೆಸುವ ದಾರಿ ಹುಡುಕಿಯೇ ಹುಡುಕುತ್ತಾರೆ.ಅದು ಹಿಂದುತ್ವದ ದಾರಿಯಾಗಿರುತ್ತದೆ ಎಂದಿರುವುದನ್ನು ಸರಸಂಘಚಾಲಕರು ಉಲ್ಲೇಖಿಸಿದರು.

ಉನ್ನತ ಸ್ಥಾನದಲ್ಲಿರುವ ಹಲವು ವ್ಯಕ್ತಿಗಳೇ ಇಂದು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಜನರ ಬೆವರ ಹಣ ದೋಚಿ ವಿದೇಶಿ ಬ್ಯಾಂಕುಗಳಲ್ಲಿ ಹಣವನ್ನು ಶೇಖರಿಸುವ ಮೂಲಕ ಪ್ರಾಮಾಣಿಕವಾಗಿ ರಾಷ್ಟ್ರಕ್ಕಾಗಿ ದುಡಿಯುವ ಪ್ರವೃತ್ತಿ ಮಾಯವಾಗಿರುವಂತೆ ಕಂಡುಬರುತ್ತಿದೆ.ಪೊಲೀಸ್, ಸೈನ್ಯವಷ್ಟೇ ರಾಷ್ಟ್ರದ ಶಕ್ತಿಯಲ್ಲ. ಸಮಾಜದ ಜಾಗೃತ ಶಕ್ತಿಯೇ ನಿಜವಾಗಿ ರಾಷ್ಟ್ರದ ಶಕ್ತಿ ಎಂದರು.

English summary
Rashtreeya Swayamsevak Sangh chief Mohan Bhagwat has addressed Sanghik at Viveka Education Institution Tenkila, Puttur, Dakshina Kannada District. The annual meet of Akhil Bharat Pratinidhi Sabha and RSS to be held here from Mar 11 to 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X