ಯುಪಿಎ ಸರಕಾರಕ್ಕೆ ಡಿಎಂಕೆ ಬೆಂಬಲ ವಾಪಸ್

ಶನಿವಾರ ಚೆನ್ನೈನಲ್ಲಿ ಕರೆಯಲಾಗಿದ್ದ ಪಕ್ಷದ ಉನ್ನತಮಟ್ಟದ ಸಭೆಯಲ್ಲಿ, ಡಿಎಂಕೆ ಪಕ್ಷದ ವರಿಷ್ಠ ಎಂ ಕರುಣಾನಿಧಿಯವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಯುಪಿಎ ಸರಕಾರದಿಂದಲೇ ಡಿಎಂಕೆ ಪಕ್ಷವನ್ನು ಕಿತ್ತೊಗೆಯಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ಇನ್ಮುಂದೆ ಯುಪಿಎ ಸರಕಾರಕ್ಕೆ ತಮ್ಮದೇನಿದ್ದರೂ ವಿಷಯಾಧಾರಿತ ಬೆಂಬಲ ಮಾತ್ರ ಎಂದು ಎಂಕೆ ಖಡಾಖಂಡಿತವಾಗಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಇನ್ನೊಂದು ತಿಂಗಳು ಇರುವಾಗಲೇ (ಏಪ್ರಿಲ್ 13) ಕಾಂಗ್ರೆಸ್ ಮೈತ್ರಿಯನ್ನು ಡಿಎಂಕೆ ಮುರಿದುಕೊಂಡಿರುವುದು ಸೀಟು ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯದಿಂದಲೇ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಸಂಬಂಧ ಹಳಿಸಿದ್ದಕ್ಕೆ ಇನ್ನೂ ಅನೇಕಾನೇಕ ಕಾರಣಗಳಿರುವುದು ಸ್ಪಷ್ಟವಾಗುತ್ತಿದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚಿನ ಸ್ಥಾನ ಬಿಟ್ಟುಕೊಡಲು ತಕರಾರು ತೆಗೆದಿದೆ. 60 ಸ್ಥಾನಗಳನ್ನು ಬಿಟ್ಟುಕೊಡಲು ಡಿಎಂಕೆ ಸಿದ್ಧವಿದ್ದರೂ 234 ಸ್ಥಾನಗಳಿರುವ ವಿಧಾನಸಭೆಯಲ್ಲಿ 63 ಸೀಟುಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಪಟ್ಟುಹಿಡಿದಿರುವುದು ಡಿಎಂಕೆ ಮೈತ್ರಿ ಸಡಿಲಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ.
ಮೈತ್ರಿ ಮುರಿದುಕೊಳ್ಳಲು ಪ್ರಮುಖ ಕಾರಣಗಳು : ಯುಪಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ (207) ಮತ್ತು ತೃಣಮೂಲ ಕಾಂಗ್ರೆಸ್ (19) ನಂತರ ಅತಿ ಹೆಚ್ಚು ಸಂಸದರನ್ನು (18) ನೀಡಿದ್ದ ಡಿಎಂಕೆಗೆ, 2ಜಿ ತರಂಗಗುಚ್ಛ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಎ ರಾಜಾರನ್ನು ಸಂಪುಟದಿಂದ ಕಿತ್ತುಹಾಕಿದ್ದು ಆರದ ಗಾಯದಂತಾಗಿತ್ತು. ಅದರ ಬೆನ್ನ ಹಿಂದೆಯೇ ಕರುಣಾನಿಧಿ ಹೆಂಡತಿ ಮಾಲಿಕತ್ವದ ಟಿವಿ ಚಾನಲ್ ಮೇಲೆ ಸಿಬಿಐ ದಾಳಿ ಮಾಡಿದ್ದು ಗಾಯದ ಮೇಲೆ ಉಪ್ಪು ಸುರಿದಂತಾಗಿತ್ತು. ಅದರ ಮೇಲೆ ಹುಳಿ ಹಿಂಡಿದಂತೆ ಕರುಣಾನಿಧಿ ಮಗಳು ಕನ್ನಿಮೋಳಿಯನ್ನು 2ಜಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರಿಪಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು.
ಮುಂದೇನು? : ಬ್ಲಾಕ್ ಮೇಲ್ ತಂತ್ರದಿಂದ ಆರಂಭದಿಂದಲೂ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಡಿಎಂಕೆಯ ಈ ನಡೆಯಿಂದ ಮುಂದೆ ಏನಾಗಬಹುದು? ಎರಡರ ನಡುವಿನ ಸ್ನೇಹ ಹಾಗೆಯೇ ಮುಂದುವರಿಯುತ್ತದೆ ಎಂದು ಕೆಲ ಡಿಎಂಕೆ ಪಕ್ಷದವರು ಹೇಳುತ್ತಿದ್ದರೂ, ಪರಿಸ್ಥಿತಿ ಕಂಡಷ್ಟು ತಿಳಿಯಾಗಿಲ್ಲ. ಕೇಂದ್ರದಲ್ಲಿ ಯುಪಿಎಗೆ ಸಂಚಕಾರ ಬಂದರೂ ಬರಬಹುದು. ಆದರೆ, ಸಮಾಜವಾದಿ ಮತ್ತು ಬಿಎಸ್ ಪಿ ಪಕ್ಷಗಳು ಸಮಯಾವಕಾಶಕ್ಕಾಗಿ ಕಾದು ಕುಳಿತಿರುವುದರಿಂದ ಕಾಂಗ್ರೆಸ್ ಜಾಸ್ತಿ ತಲೆಸಿಕೊಂಡಂತಿಲ್ಲ.
ಸಾಲದೆಂಬಂತೆ ಕರುಣಾನಿಧಿ ಅವರ ಬದ್ಧ ವೈರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಂಸದ ಎಚ್ ಡಿ ಕುಮಾರಸ್ವಾಮಿ ಕೂಡ ಯುಪಿಎಗೆ ಬೆಂಬಲ ನೀಡಲು ಸಿದ್ಧರಾಗಿ ನಿಂತಿದ್ದಾರೆ.












Click it and Unblock the Notifications