ನಂದಿನಿ ಹಾಲಿನ ದರ ಏರಿಕೆ ಇಲ್ಲ!?

ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 3 ರು. ಹೆಚ್ಚಿಸಿ ಎಂದು ಕೆಎಂಎಫ್ ಏನೋ ಸರಕಾರದ ಎದುರು ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಹೊರೆ ನೇರವಾಗಿ ಗ್ರಾಹಕನ ಮೇಲೆ ಬೀಳಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
'ಪ್ರಸ್ತುತ ದಿನಕ್ಕೆ ಒಂದು ಲಕ್ಷ ಲೀಟರ್ ಹಾಲಿನ ಕೊರತೆ ಉಂಟಾಗುತ್ತಿದೆ. ರೈತರನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯತ್ತ ಸೆಳೆಯಬೇಕಿದೆ. ಆದ್ದರಿಂದ ಅವರಿಗೆ ಪ್ರೋತ್ಸಾಹ ಧನ ನೀಡಲು ಹಾಲಿನ ಬೆಲೆಯೇರಿಕೆ ಅನಿವಾರ್ಯ' ಎಂಬುದು ಕೆಎಂಎಫ್ ವಾದ.
ಆದರೆ, ಶೀಘ್ರವೇ ಪೂರ್ಣ ಪ್ರಮಾಣದ ಕೃಷಿ ಬಜೆಟ್ ಮಂಡಿಸುವ ಉಮೇದಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಡೀ ಕೃಷಿ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡುವುದು ಖಚಿತವಾಗಿದೆ. ಕೃಷಿಯ ಅವಿಭಾಜ್ಯ ಅಂಗವಾಗಿರುವ ಹೈನುಗಾರಿಕೆಗೆ ಮಣೆ ಹಾಕುವ ಸಾಧ್ಯತೆಗಳು ನಿಚ್ಛಳವಾಗಿವೆ.
ಆದ್ದರಿಂದ ಇಡೀ ಹೈನೋದ್ಯಮಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಹಂಚಿಕೆಯಾಗಿ, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದಾಗ ಹಾಲಿನ ಬೆಲೆ ಏರಿಕೆ ವಿಷಯ ಹಿಂದೆ ಸರಿಯಲಿದೆ. ಆದ್ದರಿಂದ ಹಾಲಿನ ದರ ಏರಿಸುವ ಕೆಎಂಎಫ್ ಪ್ರಸಾವನೆಯನ್ನು ಯಡಿಯೂರಪ್ಪ ಅನುಮೋದಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುವ ಗ್ರಾಹಕನಿಗಂತೂ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತಾಗಿದೆ.











Click it and Unblock the Notifications