ಬೆಂಗಳೂರು ಬಾನಲ್ಲಿ ಉಕ್ಕಿನ ಹಕ್ಕಿಗಳ ಚಿತ್ತಾರ

ಭಾರತ ನಿರ್ಮಿಸಿದಂತಹ ಸೂಪರ್ ಸಾನಿಕ್ ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್, ಲೈಟ್ ಕಂಬ್ಯಾಟ್ ಹೆಲಿಕಾಪ್ಟರ್ ಗಳು ಮೊದಲ ಬಾರಿಗೆ ಪ್ರದರ್ಶನಕ್ಕೆ ಬರಲಿವೆ. ಇಂಡಿನ್ ಏರ್ ಫೋರ್ಸ್ ನ ಸೂರ್ಯ ಕಿರಣ್ ಏರೋಬಿಕ್ ತಂಡ, ಸಾರಂಗ ಹೆಲಿಕಾಪ್ಟರ್ ತಂಡ ಮತ್ತು ಫ್ಲೈಯಿಂಗ್ ಬುಲ್ಸ್ ಏರೋಬಿಕ್ ತಂಡಗಳು ನೋಡುಗರನ್ನು ಮೋಡಿ ಮಾಡಲಿವೆ. ಅಂದಾಜು 1.75 ಲಕ್ಷ ಸಾರ್ವಜನಿಕರು ವಿಮಾನಗಳ ಪ್ರದರ್ಶನ ಮತ್ತು ಹಾರಾಟವನ್ನು ವೀಕ್ಷಿಸಲಿದ್ದಾರೆ. ಅಪ್ಪನ ಹೆಗಲೇರಿ ಬರುವ ಮಕ್ಕಳಿಗಂತೂ ಹಬ್ಬವೋ ಹಬ್ಬ.
ಯುರೋಫೈಟರ್ ಟೈಫೂನ್ಸ್, ಸ್ವೀಡನ್ನಿನ ಗ್ರಿಪೆನ್, ಫ್ರೆಂಚ್ ಡಸಾಲ್ಟ್ ರಾಫೆಲ್, ಬೋಯಿಂಗ್ ಎಫ್-16 ಸೂಪರ್ ವೈಪರ್, ಲಾಖೀಡ್ ಮಾರ್ಟಿನ್ ನ ಎಫ್-18 ಸೂಪರ್ ಹಾರ್ನೆಟ್ ಸೇರಿದಂತೆ ದೇಶವಿದೇಶಗಳ ಅತೀದೊಡ್ಡ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಪ್ರಧಾನ ಆಕರ್ಷಣೆಯಾಗಲಿವೆ. ಅಮೆರಿಕ, ಫ್ರಾನ್ಸ್, ಜರ್ಮನಿ, ಯುಕೆ, ರಷ್ಯಾ, ಇಟಲಿ, ಬೆಲ್ಜಿಯಂ, ಅಫಘಾನಿಸ್ತಾನ, ವಿಯೆಟ್ನಾಂ, ಮಂಗೋಲಿಯಾ ಮತ್ತು ಇಸ್ರೇಲ್ ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿರುವ ಪ್ರಮುಖ ದೇಶಗಳು. ಸುಮಾರು 70 ಸಾವಿರಕ್ಕಿಂತ ಹೆಚ್ಚಿನ ವಿದೇಶಿ ಉದ್ಯಮಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ : ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿಯವರು ಏರೋ ಇಂಡಿಯಾ 2011 ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇತ್ತೀಚಿನ ಕಾಮನ್ ವೆಲ್ತ್, 2ಜಿ ತರಂಗಗುಚ್ಛ, ಇಸ್ರೋ ಸ್ಪೆಕ್ಟ್ರಂ ಹಗರಣಗಳು ಭಾರತವನ್ನು ಹೈರಾಣಾಗುವಂತೆ ಮಾಡಿವೆ. ಈ ದೃಷ್ಟಿಯಿಂದ ಎಲ್ಲರ ದೃಷ್ಟಿ ಭಾರತ ಇತರ ದೇಶಗಳ ಜೊತೆಗೆ ಮಾಡಿಕೊಳ್ಳಲಿರುವ ಒಪ್ಪಂದೆಡೆ ನೆಟ್ಟಿದೆ. 1.2 ಬಿಲಿಯನ್ ಡಾಲರ್ ಮೊತ್ತದ 126 ಕಂಬ್ಯಾಟ್ ಜೆಟ್, 750 ಮಿಲಿಯನ್ ಡಾಲರ್ ಮೊತ್ತದ 197 ಯುಟಿಲಿಟಿ ಹೆಲಿಕಾಪ್ಟರ್, 600 ಮಿಲಿಯನ್ ಡಾಲರ್ ಮೊತ್ತದ 22 ಯುದ್ಧ ಹೆಲಿಕಾಪ್ಟರ್ ಗಳು ಮಾರಾಟ ಪರವಾನಗಿಗಾಗಿ ಕಾದಿವೆ.
ಏರೋ ಇಂಡಿಯಾದಲ್ಲಿ ಭಾಗವಹಿಸಲು ಆಗಮಿಸಿರುವ ಸ್ವೀಡನ್ನಿನ ರಕ್ಷಣಾ ಸಚಿವ ಹಕನ್ ಜವ್ರೆಲ್ ಅವರು, ರಕ್ಷಣಾ ಒಪ್ಪಂದಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಎಳ್ಳಷ್ಟೂ ಅವಕಾಶ ನೀಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಬೋಫೋರ್ಸ್ ಹಗರಣವನ್ನು ನೆನಪಿಸಿಕೊಂಡ ಅವರು ಅಂಥ ಹಗರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಎಲ್ ಸಿ ಎ ಜನಕನಿಗೆ ಜೀವಮಾನ ಪ್ರಶಸ್ತಿ : ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್ (ತೇಜನ್) ಜನಕ ಎಂದೇ ಖ್ಯಾತರಾಗಿರುವ ಡಾ. ಕೋಟ ಹರಿನಾರಾಯಣ ಅವರಿಗೆ, ಅಂತಾರಾಷ್ಟ್ರೀಯ ಏರೋಸ್ಪೇಸ್ ಮ್ಯಾಗಜೀನ್ ನೀಡುತ್ತಿರುವ ಜೀವಮಾನ ಸಾಧನೆ ಪ್ರಶಸ್ತಿ ಇಂದು ಸಂದಿದೆ. ಏರೋ ಇಂಡಿಯಾ 2011 ನಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರಶಸ್ತಿಯ ಗರಿ ಬಂದಿರುವುದು ಸಂತೋಷವನ್ನು ದ್ವಿಗುಣಗೊಳಿಸಿದೆ.
ಈ ಸ್ಪರ್ಧಾತ್ಮಕ ಯುಗದಲ್ಲಿ ದೇಸೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ದೇಶದ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಸ್ಫೂರ್ತಿಯನ್ನು ನೀಡಲಿದೆ. ಇಷ್ಟು ವರ್ಷ ಋಣಾತ್ಮಕವಾಗಿ ಬರೆದರೂ ಇಷ್ಟು ವರ್ಷಗಳ ಬಳಿಕ ಭಾರತದ ರಕ್ಷಣಾ ಸಂಸ್ಥೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿರುವುದು ಖುಷಿ ತಂದಿದೆ ಎಂದು ಅವರು ಸಂಸತವನ್ನು ಪ್ರಶಸ್ತಿ ಪ್ರದಾನದ ನಂತರ ಹಂಚಿಕೊಂಡರು.
ಟಿಕೆಟ್ ಮಾರಾಟ : ಇಂದಿರಾನಗರ, ಮಲ್ಲೇಶ್ವರ, ಎಂಜಿ ರಸ್ತೆ, ಯಲಹಂಕ ನ್ಯೂಟೌನ್, ಕೋರಮಂಗಲ ಮತ್ತು ಜೆಪಿ ನಗರದ ಎಸ್ ಬಿ ಐ ಶಾಖೆಗಳಲ್ಲಿ ಟಿಕೆಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಕೋರಮಂಗಲದ ಫೋರಂ ಮಾಲ್, ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿಯೂ ಟಿಕೆಟ್ ಮಾರಲಾಗುತ್ತಿದೆ. ವಾರದ ದಿನದಲ್ಲಿ 400 ರು. ಮತ್ತು ವಾರಾಂತ್ಯದಲ್ಲಿ 500 ರು.ಗೆ ಟಿಕೆಟ್ ಮಾರಲಾಗುತ್ತಿದೆ.












Click it and Unblock the Notifications