ರಾಷ್ಟ್ರಧ್ವಜದಡಿ ಒಂದಾದ ಭಾರದ್ವಾಜ್, ಯಡಿಯೂರಪ್ಪ

ಕೆಂಪು ರೋಜಾದಿಂದ ಕಂಗೊಳಿಸುತ್ತಿದ್ದ ಶ್ವೇತವರ್ಣ ದಿರಿಸು ಧರಿಸಿದ್ದ ರಾಜ್ಯಪಾಲರು ತೆರೆದ ಜೀಪಿನಲ್ಲಿ ಮೈದಾನ ಸುತ್ತು ಹಾಕಿ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. ನಾನಾ ಶಾಲೆಯ ಮಕ್ಕಳೂ ಸೇರಿದಂತೆ ಮೈದಾನದಲ್ಲಿ ನೆರೆದಿದ್ದ ಸುಮಾರು 3 ಸಾವಿರಕ್ಕೂ ಹೆಚ್ಚಿನ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ರಾಷ್ಟ್ರಧ್ವಜ ಸ್ತಂಭದ ಮೇಲೆ ಬಿಚ್ಚಿಕೊಂಡು ಪಟಪಟಿಸಿದಾಗ ಆಕಾಶದಿಂದ ಹೆಲಿಕಾಪ್ಟರ್ ಮುಖಾಂತರ ಕೆಂಪು ರೋಜಾ ಪಕಳೆಗಳನ್ನು ಸುರಿಸಲಾಯಿತು. ನಂತರ ರಾಷ್ಟ್ರಗೀತೆ ಹಾಡಲಾಯಿತು. ಭೂದಳ, ನೌಕಾದಳ, ವಾಯುದಳ, ಕರ್ನಾಟಕ ರಾಜ್ಯ ಪೊಲೀಸ್, ಎನ್ ಸಿಸಿ ಕೆಡೆಟ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಪಥಸಂಚಲ ನಡೆಸಿ ಗಣರಾಜ್ಯೋತ್ಸವಕ್ಕೆ ಶೋಭೆ ತಂದರು.
ಕೈಕುಲುಕಿದ ಹಂಸ್, ಯಡಿಯೂರಪ್ಪ : ಭೂ ಹಗರಣ ಮತ್ತು ಭ್ರಷ್ಟಾಚಾರಗಳಿಂದಾಗಿ ರಾಜಕೀಯ ರಣರಂಗದಲ್ಲಿ ಕತ್ತಿ ಝಳಪಿಸುತ್ತಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಈ ದಿನದ ಮಟ್ಟಿಗಾದರೂ ತಮ್ಮ ವೈರತ್ವವನ್ನು ಮರೆತು ಕೈಕೈ ಕುಲುಕಿದರು.
ವಾಡಿಕೆಯಂತೆ ಯಡಿಯೂರಪ್ಪನವರು ಭಾರದ್ವಾಜ್ ಅವರಿಗೆ ಹೂಗುಚ್ಛ ಅರ್ಪಿಸಿ ಶುಭಕೋರಿದರು. ನಂತರ ಫೆಬ್ರವರಿ 9ರಿಂದ 28ರವರೆಗೆ ನಡೆಯಲಿರುವ ಭಾರತದ ಜನಗಣತಿ 2011 ಅಭಿಯಾನಕ್ಕೆ ಜಂಟಿಯಾಗಿ ಚಾಲನೆ ನೀಡಿದರು. [ಗಣರಾಜ್ಯೋತ್ಸವ]











Click it and Unblock the Notifications