ಸಂಪುಟ ನಿರ್ಧಾರಕ್ಕೆ ಡೋಂಟ್ ಕೇರ್ : ಭಾರದ್ವಾಜ್

ಸರಕಾರ ಬುಧವಾರ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ರಾಜ್ಯ ಸರಕಾರ ರಾಷ್ಟ್ರಪತಿಗಳಿಗೆ ದೂರು ನೀಡುವುದಾಗಿ ಹೇಳಿದೆ. ಅಲ್ಲದೇ, ಕರ್ನಾಟಕ ಬಂದ್ ಘೋಷಣೆ ಮಾಡುವುದಾಗಿಯೂ ಎಚ್ಚರಿಸಿದೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಂವಿಧಾನದ ಪ್ರಕಾರ ನಾನು ಕ್ರಮ ಕೈಗೊಳ್ಳುತ್ತೇನೆ. ಇನ್ನೆರಡು ದಿನಗಳಲ್ಲಿ ನನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯಪಾಲರ ಈ ಹೇಳಿಕೆ ರಾಜ್ಯ ಸರಕಾರದೊಳಗೆ ತೀವ್ರ ತಲ್ಲಣವನ್ನುಂಟು ಮಾಡಿದೆ.
ನನ್ನ ವಿರುದ್ದ ಸರಕಾರ ಸಮರ ಸಾರಿರುವುದು ಸರಿಯಲ್ಲ. ಇದು ಕಳ್ಳ ಪೊಲೀಸನನ್ನು ಬೆದರಿಸಿದ ಹಾಗೆ ಇದೆ. ಸರಕಾರ ನೀಡಿರುವ ಪತ್ರದಲ್ಲಿ ಬೇರೆ ಹೊಸದೇನೂ ಇಲ್ಲ. ಭೂಹಗರಣವನ್ನು ಲೋಕಾಯುಕ್ತರು, ಆಯೋಗವೊಂದು ತನಿಖೆ ನಡೆಸಿದೆ. ಇದೇ ಪ್ರಕರಣವೊಂದು ಹೈಕೋರ್ಟ್ ನಲ್ಲಿದೆ. ಹೀಗಿರುವಾಗ ಇನ್ನೊಂದು ಮೊಕದ್ದಮೆ ಏಕೆ ಎಂದು ಸರಕಾರ ಪ್ರಶ್ನಿಸಿದೆ. ಅದಿರಲಿ ಭೂಹಗರಣದ ಬಗ್ಗೆ ವರದಿ ನೀಡುವಂತೆ ಕೇಳಿ ಸರಕಾರಕ್ಕೆ ಜ.20 ಗಡುವು ನೀಡಿದ್ದೆ. ಇವರೆಗೂ ಸರಕಾರ ಯಾವ ವರದಿಯನ್ನೂ ಸಲ್ಲಿಸಿಲ್ಲ ಎಂದು ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದರು.
ಭೂ ಹಗರಣದ ಬಗ್ಗೆ ಲೋಕಾಯುಕ್ತ ಇಲಾಖೆ ಮತ್ತು ನ್ಯಾ. ಪದ್ಮರಾಜ್ ಆಯೋಗ ತನಿಖೆ ನಡೆಸಿವೆ. ಜೊತೆಗೆ ಇದೇ ವಿಷಯಕ್ಕೆ ಸಂಬಂಧಿಸಿದ ಪ್ರಕರಣವೊಂದು ಹೈಕೋರ್ಟ್ ನಲ್ಲಿದೆ. ಹೀಗಾಗಿ ಇನ್ನೊಂದು ಮೊಕದ್ದಮೆ ಬೇಡ ಎಂದು ಸರಕಾರ ರಾಜ್ಯಪಾಲರಿಗೆ ಬುಧವಾರ ಪತ್ರ ಬರೆದಿತ್ತು. ಸಿರ್ಜಿನ್ ಪಾಷಾ ಮತ್ತು ಕೆ ಎನ್ ಬಾಲಕೃಷ್ಣ ಅವರನ್ನು ಒಳಗೊಂಡ ವಕೀಲರ ಫೋರಂ, ಮುಖ್ಯಮಂತ್ರಿಗಳ ಭೂಹಗರಣದ ಸುಮಾರು 2000 ಪುಟಗಳ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಮುಖ್ಯಮಂತ್ರಿಗಳ ವಿರುದ್ದ ಮೊಕದ್ದಮೆ ದಾಖಲಿಸಲು ಅನುಮತಿಯನ್ನು ಕೋರಿತ್ತು.(ಎಚ್ ಆರ್ ಭಾರದ್ವಾಜ್)












Click it and Unblock the Notifications