ಮೆಟ್ರೋ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ

ಭೈಯಪ್ಪನಹಳ್ಳಿಯಿಂದ ಚಿನ್ನಸ್ವಾಮಿ ಮೈದಾನದವರಿಗೆ 7 ಕಿಮೀ ದೂರದಲ್ಲಿ ಮೆಟ್ರೋ ರೈಲು ಸಂಚಾರ ಡಿಸೆಂಬರ್ ನಲ್ಲಿ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಘೋಷಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ದನಿಗೂಡಿಸಿದ್ದರು. ಆದರೆ, ತಾಂತ್ರಿಕ ಕಾರಣದಿಂದ ಪ್ರಾಯೋಗಿಕ ರೈಲಿನ ಸಂಚಾರ ಮುಂದೂಡಲಾಗಿತ್ತು. ಇದೀಗ ಮೆಟ್ರೋ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ವಿಡಿಯೋ: ನಮ್ಮ ಮೆಟ್ರೋ ರೈಲು ಬರ್ತಾ ಇದೆ ದಾರಿ ಬಿಡಿ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಗದಿಯಂತೆ 7 ಕಿಮೀ ಮಾರ್ಗದ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಭಾರತೀಯ ರೈಲ್ವೆ ವಲಯದಿಂದ ಅಧಿಕೃತವಾಗಿ ಅನುಮತಿ ಪಡೆದ ನಂತರವೇ ರೈಲು ಸಂಚಾರ ಆರಂಭಿಸಬೇಕಿದೆ. ಹೀಗಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿ ಮೆಟ್ರೋ ಮಾರ್ಗ ಸಂಚಾರ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕಿದೆ.
ನಮ್ಮ ಮೆಟ್ರೋ ಒಟ್ಟು ಮೂರು ಕೋಚ್ ಗಳನ್ನು ಹೊಂದಿದ್ದು, ಅಕ್ಟೋಬರ್ ನಲ್ಲಿ ಕೋರಿಯಾದಿಂದ ವಿಶೇಷ ಹಡಗಿನಲ್ಲಿ ಚೆನ್ನೈ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳಲಾಗಿತ್ತು. ಮುಂದಿನ ಪ್ರಾಯೋಗಿಕ ಸಂಚಾರ 2011ರ ಫೆಬ್ರವರಿಯಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಮೆಟ್ರೋ ರೈಲು)












Click it and Unblock the Notifications