ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗದಿದ್ದರೆ ಬಿಟ್ಟುಬಿಡಿ ಅತ್ಲಾಗೆ, ಕೊಲ್ಲೋದು ಯಾಕೆ?

By * ಪ್ರಸಾದ ನಾಯಿಕ
|
Google Oneindia Kannada News

Souring relationships : Killing spouce not only option
ಸಂಸಾರವೆಂದ ಮೇಲೆ ಜಗಳ, ಮನಸ್ತಾಪ, ಕಿರಿಕಿರಿ, ಮಾನಸಿಕ ಕ್ಷೋಭೆ, ಗೊಂದಲಗಳೆಲ್ಲ ಇದ್ದದ್ದೇ. ಎಲ್ಲರ ಮನೆ ದೋಸೆಯಲ್ಲೂ ತೂತು ಎನ್ನುವ ಹಾಗೆ ಎಲ್ಲರ ಮನೆಯ ಸಂಸಾರದಲ್ಲೂ ಸರಿಗಮ ತಾಳತಪ್ಪದೆ ಇರದು. ಗಂಡ-ಹೆಂಡತಿ ಎಷ್ಟೇ ಅನ್ಯೋನ್ಯವಾಗಿ ಇದ್ದಾರೆ ಅಂದರೂ ಸಣ್ಣ ಮುನಿಸುಗಳು, ಇರುಸುಮುರುಸುಗಳು ಇರದಿದ್ದರೆ ಅವರು ನೈಜ ಅರ್ಥದಲ್ಲಿ ದಂಪತಿಗಳೇ ಅಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ, ಅನೇಕಾನೇಕ ಕಾರಣಗಳಿಂದಾಗಿ ದಂಪತಿಗಳ ಮಧ್ಯೆ ಜಗಳ, ಮನಸ್ತಾಪಗಳು ಹೆಚ್ಚಾಗುತ್ತಿವೆ. ಇದನ್ನು ಮನಃಶ್ಶಾಸ್ತ್ರಜ್ಞರೇ ಒಪ್ಪಿಕೊಂಡಿದ್ದಾರೆ. ಕೆಲಸದ ಒತ್ತಡ, ದುಬಾರಿ ಕಾಲದಲ್ಲಿ ಸಂಸಾರ ರಥ ಮುನ್ನಡೆಸುವ ಕಷ್ಟ, ಒಂದಾಗದ ಮನಸುಗಳು, ಬೇಡವಾದ ಸಂಬಂಧ, ಅನೈತಿಕ ಸಂಬಂಧಗಳು ವಿಪರೀತಕ್ಕೆ ಹೋಗಿ ಆಗಬಾರದ ಅವಘಡಗಳು ಸಂಭವಿಸುತ್ತಿವೆ. ಕೆಲ ಬಾರಿ ಕ್ಷುಲ್ಲಕ ಕಾರಣಗಳು ಕೂಡ ಕೊಲೆಯಲ್ಲಿ ಪರ್ಯವಸಾನಗೊಂಡಿವೆ.

ಇದಕ್ಕೆ ನಿನ್ನೆ ತಾನೆ ಡೆಹ್ರಾಡೂನ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಮಾಡಿರುವ ಬರ್ಬರ ಹತ್ಯೆಯೇ ಜ್ವಲಂತ ಸಾಕ್ಷಿ. ಕೆಲ ತಿಂಗಳ ಹಿಂದೆ ಕೂಡ ಬೆಂಗಳೂರಿನ ಹುಳಿಮಾವುದಲ್ಲಿ ಇನ್ಫೋಸಿಸ್ ಉದ್ಯೋಗಿಯೊಬ್ಬರು ತಮ್ಮ ಹೆಂಡತಿಯನ್ನು ಅಮಾನುಷವಾಗಿ ಕೊಲೆಗೈದಿದ್ದರು. ಇನ್ನು ಇಡೀ ನಾಡನ್ನು ಇನ್ನೂ ಕಾಡುತ್ತಿರುವ ಇಂಟೆಲ್ ಟೆಕ್ಕಿ ಗಿರೀಶ್ ಅವರನ್ನು ಸುಂದರಿ ಶುಭಾ ಹತ್ಯೆಗೈದಿದ್ದನ್ನು ಮರೆಯುವಂತೆಯೇ ಇಲ್ಲ. ಮತ್ತೊಂದು ಘಟನೆಯಲ್ಲಿ ತಮಿಳುನಾಡು ಮೂಲದ ಟೆಕ್ಕಿ ತನ್ನ ಹೆಂಡತಿಯ ಚಾರಿತ್ರ್ಯವನ್ನು ಅನುಮಾನಿಸಿ ಸ್ವತಃ ಅತ್ಯಾಚಾರ ಎಸಗಿ, ಗ್ಲಾಸಿನಿಂದ ಕತ್ತುಕೊಯ್ದು ಕೊಲೆ ಮಾಡಿದ್ದ.

ಡೆಹ್ರಾಡೂನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡಿರ ನಡುವೆ ಜಗಳ ಸಂಭವಿಸಿ, ಗಂಡ ರಾಜೇಶ್ ತನ್ನ ಹೆಂಡತಿ ಅನುಪಮಾರನ್ನು ಕೊಲೆ ಮಾಡಿ ಫ್ರೀಜರ್ ನಲ್ಲಿ ಇಟ್ಟಿದ್ದ. ಬೆಂಗಳೂರಿನ ಸತೀಶ್ ಗುಪ್ತಾ ಕೂಡ, ಹೆಂಡತಿ ಮತ್ತು ಆಕೆಯ ಮನೆಯವರು ತನ್ನನ್ನು ನಿಂದಿಸಿದರು ಎಂಬ ಕಾರಣಕ್ಕೆ ಹೆಂಡತಿ ಪ್ರಿಯಾಂಕಾಳನ್ನು ಕುರ್ಚಿಗೆ ಕಟ್ಟಿ ಭಯಾನಕವಾಗಿ ಸಾಯಿಸಿದ್ದ. ಇನ್ನು ಸುಂದರಿ ಶುಭಾ ಸಂಚು ಹೂಡಿ ಗಿರೀಶ್ ಅವರನ್ನು ಹತ್ಯೆ ಮಾಡಿಸಿದ್ದನ್ನು ವಿವರಿಸುವ ಅಗತ್ಯವಿಲ್ಲ.

ಈ ಎಲ್ಲ ಘಟನೆಗಳಲ್ಲಿ ಹತ್ಯೆ ಮಾಡಿದವರು ಮತ್ತು ಮಾಡಿಸಿದವರು ತಾವು ಅಮಾಯಕರು, ತಮಗೇನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಇವುಗಳಲ್ಲಿ ಉದ್ಭವಿಸಿದ್ದ ಸಮಸ್ಯೆ, ಮತ್ತು ಆ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಹಿಡಿಯುವ ಮಾರ್ಗವಿದ್ದರೂ ಅನವಶ್ಯಕವಾಗಿ ಕೊಲೆ ಮಾಡಲಾಗಿತ್ತು. ಇಂಥ ಕ್ಷುಲ್ಲಕ ಸಮಸ್ಯೆಗಳಿಗೆ ಕೊಲೆಯೇ ಪರಿಹಾರವೆ? ಸೂಕ್ಷ್ಮವಾಗಿ ಗಮನಿಸಿದರೆ ಇಂಥ ಕೊಲೆಗಳು ಸಿಟ್ಟಿನ ಭರದಲ್ಲಿ ಅಥವಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾಡಿದುವಲ್ಲ. ಇವು ಅತ್ಯಂತ ಜಾಣತನದಿಂದ ಸಂಚು ರೂಪಿಸಿ ಮಾಡಿದ ಬರ್ಬರ ಹತ್ಯೆಗಳಾಗಿವೆ. ವಿವೇಚನೆಯಿಂದ ವರ್ತಿಸಿದ್ದರೆ ಈ ಕೊಲೆಗಳನ್ನೆಲ್ಲ ನಿವಾರಿಸಬಹುದಿತ್ತು ಮತ್ತು ಅಮಾಯಕ ಜೀವಗಳನ್ನು ಉಳಿಸಬಹುದಿತ್ತು.

ಕೊಲೆಯೊಂದೇ ಮಾರ್ಗವಲ್ಲ
* ಮದುವೆಯಾಗಲು ಇಷ್ಟವಿಲ್ಲದಿದ್ದರೆ ಮನೆಯವರಿಗೆ ತಿಳಿಸಿ ಸಂಬಂಧವನ್ನು ಕಡಿದುಕೊಳ್ಳಬಹುದು.
* ಜಗಳಗಳ ಎಷ್ಟೇ ಅತಿರೇಕಕ್ಕೆ ಹೋದರೂ ಗಂಡ ಹೆಂಡತಿ ಪಟ್ಟಾಗಿ ಕುಳಿತುಕೊಂಡು ಪರಸ್ಪರ ಚರ್ಚೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
* ಅಗತ್ಯ ಬಿದ್ದರೆ ಮಾನಸಿಕ ತಜ್ಞರು ಅಥವಾ ಮದುವೆ ಸಹಲೆಗಾರರ ನೆರವನ್ನೂ ಪಡೆಯಬಹುದು.
* ತೀರ ಸಾಧ್ಯವೇ ಇಲ್ಲವೆಂದರೆ ವಿಚ್ಛೇದನಕ್ಕಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು.

ಅಲ್ಲಿಯವನು ಇಲ್ಲಿಗೆ ಬಂದ, ಇಲ್ಲಿಯವನು ಅಲ್ಲಿಗೆ ಹೋದ ಮುಂತಾದ ಕೆಲಸಕ್ಕೆ ಬಾರದ ರಿಯಾಲಿಟಿ ಶೋಗಳನ್ನು ನಡೆಸುವ ಬದಲು ಟಿವಿ ಚಾನಲ್ಲುಗಳು ಮಾನವ ಸಂಬಂಧಗಳನ್ನು ಗಟ್ಟಿಯಾಗಿಸುವ, ಗಂಡ ಹೆಂಡಿರ ಸಂಬಂಧಗಳನ್ನು ಬೆಸೆಯುವ ರಿಯಾಲಿಟಿ ಶೋಗಳನ್ನು ಯಾಕೆ ಮಾಡಬಾರದು? ಇದರಿಂದ ಟಿಆರ್ಪಿ ಏರಲಿಕ್ಕಿಲ್ಲ. ಆದರೆ, ಸಾಮಾಜಿಕ ಜವಾಬ್ದಾರಿಯನ್ನು ಈ ಟಿವಿ ಚಾನಲ್ಲುಗಳು ಮೆರೆದಂತಾಗುತ್ತದೆ. ಇಂಥ ಸಮಸ್ಯೆ ಮತ್ತು ಅವುಗಳಿಂದಾಗುತ್ತಿರುವ ಅವಘಡಗಳ ಬಗ್ಗೆ ಸಾರ್ವಜನಿಕವಾಗಿ ಕೂಡ ಚರ್ಚೆಯಾಗಬೇಕಿದೆ.

English summary
Killing the spouce is not the only option when relationship deteriorates between couple. Now-a-days murders are happening due to souring relations and many a times for silly reasons and unnecessarily. So, what is the solution? Let"s discuss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X