• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಕೃತಿ ವೈಭವ : ಮಡಿಕೇರಿ ಮೇಲ್ ಮಂಜು

By * ಬಿ.ಎಂ.ಲವಕುಮಾರ್, ಮೈಸೂರು
|

ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ

ಬೆಳ್ಳಿ ಬಳದಿದ್ ರೋಡ್ ಇದ್ದಂಗೆ

ಸಾಫಾಗ್ ಅಳ್ಳ ತಿಟ್ಟಿಲ್ದಂಗೆ

ಮಡಿಕೇರಿಲಿ ಮಂಜು...

ಮಡಗಿದ್ ಅಲ್ಲೇ ಮಡಗಿದ್ದಂಗೆ

ಲಂಗರ್ ಬಿದ್ದಿದ್ ಅಡಗಿದ್ದಂಗೆ

ಸೀತರ್ ಸಕ್ತಿ ಉಡಗೋದಂಗೆ

ಅಳ್ಳಾಡಾಲ್ದು ಮಂಜು.....

ಇದು ಮಡಿಕೇರಿಯ ಮಂಜಿನ ಕುರಿತು ಕವಿ ಜಿ.ಪಿ.ರಾಜರತ್ನಂರವರು ಬರೆದ ಕವನದ ಸಾಲು... ಹೌದು! ನೀವೊಮ್ಮೆ ಮಡಿಕೇರಿಗೆ ಹೋಗಿದ್ದೇ ಆದರೆ ಮುಂಜಾನೆಯ ಮಂಜಿನ ಆಟ ಇಂತಹ ಹತ್ತಾರು ಕವನಗಳಿಗೆ ಸ್ಪೂರ್ತಿ ನೀಡಬಹುದು.

ಹಾಗೆನೋಡಿದರೆ ಮಂಜಿನ ನಗರಿ ಮಡಿಕೇರಿ ಇತರೆ ನಗರಗಳಿಗೆ ಹೋಲಿಸಿದರೆ ಹಲವು ವೈವಿಧ್ಯತೆಗಳನ್ನು ಹೊಂದಿ ವಿಶಿಷ್ಟವಾಗಿಯೂ... ವಿಭಿನ್ನವಾಗಿಯೂ... ಗಮನಸೆಳೆಯುತ್ತದೆ.

ಬೆಟ್ಟಗುಡ್ಡಗಳು ಅವುಗಳ ನಡುವೆ ಒತ್ತೊತ್ತಾಗಿ ಎದ್ದು ನಿಂತ ಜನವಸತಿಗಳು... ದೂರದ ಬೆಟ್ಟ ಕಣಿವೆಗಳಲ್ಲಿ ಬೆಳೆದು ನಿಂತ ಹಸಿರು ವನದ ರಾಶಿ... ಹೀಗೆ ಒಂದೇ ಎರಡೇ.. ನಿಸರ್ಗ ಪ್ರೇಮಿಗಳಿಗೆ ರಸದೌತಣ. ಇನ್ನು ಪ್ರವಾಸಿಗರು ವೀಕ್ಷಿಸಲಾರ್ಹ ಹತ್ತು ಹಲವು ತಾಣಗಳೂ ಇಲ್ಲಿವೆ. ಅವುಗಳೆಂದರೆ ಕೋಟೆ, ಅರಮನೆ, ಗದ್ದುಗೆ, ಓಂಕಾರೇಶ್ವರ ದೇವಸ್ಥಾನ, ರಾಜಾಸೀಟ್ ಹೀಗೆ...

ಇನ್ನು ಮಳೆಗಾಲದಲ್ಲಿ ಭೋರ್ಗರೆದು ಸುರಿಯುವ ಮಳೆ. ಚಳಿಗಾಲದಲ್ಲಿ ಮೈಕೊರೆಯುವ ಚಳಿ. ಬೇಸಿಗೆಯಲ್ಲಿ ತಂಪು ಹವೆ. ಇದರ ನಡುವೆ ಇಡೀ ನಗರವನ್ನಾವರಿಸುವ ಮಂಜು ಸ್ವರ್ಗಲೋಕವನ್ನು ಸೃಷ್ಟಿಸಿ, ಅಲ್ಲಿಯೇ ಹೆಜ್ಜೆಯಿಡುತ್ತಿದ್ದೇವೆಯೇನೋ ಎಂಬಂತೆ ಮಾಡಿಬಿಡುತ್ತದೆ.

ನಿನ್ನೆ, ಮೊನ್ನೆ ತನಕ ಜಿಟಿ...ಜಿಟಿ... ಮಳೆ. ಮೈಕೊರೆಯುವ ಚಳಿ. ಸದಾ ಮಳೆ ಮೋಡದ ಮುಸುಕು ಹೊದ್ದು ಕುಳಿತಂತಿದ್ದು, ಬೋರ್ ಹೊಡೆಸುತ್ತಿದ್ದು ಮಡಿಕೇರಿ ಈಗ ಜಡತ್ವವನ್ನು ಕೊಡವಿಕೊಂಡು ತನ್ನ ಸ್ನಿಗ್ಧ ಸೌಂದರ್ಯವನ್ನು ವೀಕ್ಷಿಸ ಬರುವವರಿಗಾಗಿ ಕಿನ್ನರಲೋಕವನ್ನೇ ಸೃಷ್ಟಿ ಮಾಡಿ ನಿಂತಿದೆ. ಈಗ ಮಡಿಕೇರಿ ಮೇಲೆ ಬರೀ ಮಂಜು....

ಮುಂಜಾವು ಮಡಿಕೇರಿ ನಗರದಲ್ಲಿ ಹೆಜ್ಜೆಯಿಡುತ್ತಿದ್ದರೆ ಪುರಾಣದ ಸ್ವರ್ಗಲೋಕ ನೆನಪಾಗಿ ಅಲ್ಲಿಯೇ ನಡೆದಾಡುತ್ತಿದ್ದೇವೆಯೇನೋ ಎಂಬಂತೆ ಭಾಸವಾಗದಿರದು. ನಮ್ಮನ್ನು ಮುಸುಕು ಹಾಕಿ ತೇಲಿ ಹೋಗುವ ಮಂಜಿನ ತೆರೆಗಳು ಏರು-ತಗ್ಗು ಹಳ್ಳ-ಕೊಳ್ಳಗಳನ್ನೆಲ್ಲಾ ತುಂಬಿ ಕಣ್ಣು ಹಾಯಿಸಿದೆಡೆಗಳಲೆಲ್ಲಾ ಬರೀ ಮಂಜೇ ತುಂಬಿ ತುಳುಕುತ್ತಾ ಒಂದು ಕ್ಷಣ ತಬ್ಬಿಬ್ಬುಗೊಳಿಸಿ ಬಿಡುತ್ತದೆ.

ಯಾರು ಯಾರೆಂದು ಕಾಣದಷ್ಟು ದಟ್ಟವಾಗಿ ಆವರಿಸಿಕೊಳ್ಳುವ ಮಂಜು ಬೆಟ್ಟಗುಡ್ಡ ಕಣಿವೆಗಳನ್ನೆಲ್ಲಾ ಒಂದು ಮಾಡಿ ಮಂಜಿನಸಾಗರವನ್ನೇ ಸೃಷ್ಟಿಸಿ ಬಿಡುತ್ತದೆ. ಹೆಮ್ಮರಗಳೆಡೆಗೆ ನುಸುಳಿ ಝರಿ ಮೇಲಿನ ಪೊದೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿ ಸೂರ್ಯ ರಶ್ಮಿ ಮೈಮೇಲೆ ಬೀಳುತ್ತಿದ್ದಂತೆಯೇ ನೆಗೆದು ಓಡುವ ಓಟ ಮನಮೋಹಕವಾಗಿರುತ್ತದೆ. ಇಡೀ ನಗರವನ್ನು ಬೆಳ್ಳಿ ಪರದೆಯೊಳಗೆ ಬಂಧಿಸಿ ಆಕಾಶ ಭೂಮಿಯನ್ನು ಒಂದು ಮಾಡಿ ನಿಂತು ಬಿಡುತ್ತದೆ.

ರಾಜಾಸೀಟಿನತ್ತ ಹೆಜ್ಜೆಹಾಕಿದರೆ ಅಲ್ಲಿ ಕಾಣಸಿಗುವ ನಯನ ಮನೋಹರ ದೃಶ್ಯ ನಿಸರ್ಗ ಆಸ್ವಾದಕರನ್ನು ಪುಳಕಗೊಳಿಸುವುದರೊಂದಿಗೆ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಗುಡ್ಡದಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ಹಸಿರ ಮರಗಳ ಮೇಲೆಲ್ಲಾ ಬೆಳ್ಳಿಸುರಿದು ಬಿಡುವ ಮಂಜು ಬೀಸುವ ಗಾಳಿಗೆ ಲಾಗ ಹೊಡೆಯುತ್ತಿರುತ್ತದೆ. ಮಂಜಿನ ಪರದೆಯಲ್ಲಿ ಅಡಗಿದ ಮರಗಳು ಆಗೊಮ್ಮೆ ಈಗೊಮ್ಮೆ ಪರದೆ ಸರಿಸಿ ಇಣುಕಿ ತುಂಟ ನೋಟ ಬೀರುತ್ತದೆ. ಗಿಡ ಮರಗಳ ಮೇಲೆಲ್ಲಾ ತುಂಬಿ ನಿಂತ ಮಂಜು ಹನಿಗಳು ಪಟಪಟನೆ ತೊಟ್ಟಿಕ್ಕುತ್ತಿರುತ್ತವೆ. ಆ ಗುಡ್ಡ ಈ ಗುಡ್ಡ ಮಧ್ಯದ ಕಣಿವೆಗೆ ಸೇತುವೆ ಕಟ್ಟುವ ಮಂಜು ಒಂದೆಡೆಯಿಂದ ಮತ್ತೊಂದೆಡೆಗೆ ತುರ್ತು ಕೆಲಸವಿರುವಂತೆ ಓಡುತ್ತಿರುತ್ತವೆ.

ಕಣಿವೆಗಳ ನಡುವಿನ ಹಾವು ಸರಿದಂತಿರುವ ರಸ್ತೆಯಲ್ಲಿ ಸಾಗಿಬರುವ ವಾಹನಗಳ ಮಂದ ದೀಪ ಹೊಸ ಅನುಭವ ನೀಡುತ್ತದೆ. ಸೂರ್ಯೋದಯದ ಹೊತ್ತಿಗೆ ತನ್ನ ಮೇಲೆ ಬೀಳುವ ಸೂರ್ಯರಶ್ಮಿಯಲ್ಲಿ ಬಗೆಬಗೆಯ ಚೆಲುವು ಪ್ರದರ್ಶಿಸುವ, ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಪರದೆ ಕಳಚಿ ಮಾಯವಾಗಿ ಬಿಡುವ ಮಂಜು ಕೆಲವೊಮ್ಮೆ ಇಡೀ ದಿನವಿದ್ದು, ವಾಹನಗಳು ದೀಪ ಉರಿಸಿಕೊಂಡೇ ಓಡಾಡುವಂತೆ ಮಾಡಿ ಬಿಡುತ್ತದೆ. ಮಳೆಗಾಲದ ದಿನಗಳಲ್ಲಿ ದಿನವಿಡೀ ಮುಸುಕಿನಲ್ಲಿ ಕಟ್ಟಿ ಬಿಡುವ ಮಂಜು ಮಡಿಕೇರಿಯನ್ನು ಕತ್ತಲಾಗಿಸಿ ಬೋರ್ ಹೊಡೆಸುತ್ತದೆ. ಕೆಲವೊಮ್ಮೆ ಅನಾಹುತಗಳಿಗೂ ಎಡೆಮಾಡಿಬಿಡುತ್ತದೆ. ಬೆಳೆ ಮೇಲೆಲ್ಲಾ ಸದಾ ಮಂಜು ಸುರಿದು ಕೃಷಿಕನಿಗೂ ಸಂಚಕಾರ ತರುವುದಿದೆ. ಪ್ರಾಂಜಲ ಮನಸ್ಸಿನಿಂದ ನೋಡಿದ್ದೇ ಆದರೆ ಮಡಿಕೇರಿ ಮಂಜು ಕವಿಗಳಿಗೆ ಕವನವಾಗುತ್ತದೆ. ನಿಸರ್ಗ ರಸಿಕರಿಗೆ ರಸದೌತಣವಾಗುತ್ತದೆ.

English summary
To savor the beauty of mist one should come to Madikeri, the Kashmir of Karnataka, during winter. The nature beauty in Coorg, the tourists paradise, is attracting more and more tourists this season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X