ದೇಶದ 5 ಪ್ರಮುಖ ಶ್ರೀಮಂತ ಕಂಪನಿಗಳು

ಇಂದು ವಿಶ್ವದಲ್ಲೇ ಅತೀ ದೊಡ್ಡ ಉಕ್ಕು ತಯಾರಿಸುತ್ತಿರುವ ಕಂಪನಿ ಲಕ್ಷ್ಮಿ ಮಿತ್ತಲ್ ರ ಮಿತ್ತಲ್ ಸ್ಟೀಲ್ಸ್ ಆಗಿದ್ದರೆ, ಎರಡನೇ ಅತೀ ದೊಡ್ಡ ಉಕ್ಕು ಕಂಪನಿ ಟಾಟಾ ಮಾಲೀಕತ್ವದ ಕೋರಸ್ ಆಗಿದೆ. ಡಾ. ವಿಜಯ್ ಮಲ್ಯರ ಯುನೈಟೆಡ್ ಸ್ಪಿರಿಟ್ಸ್ ವಿಶ್ವದ ಅತೀ ದೊಡ್ಡ ಮದ್ಯ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಮನೆ ಮಾತಾಗಿರುವ ಅತೀ ಹೆಚ್ಚು ಮೌಲ್ಯಯುತವಾದ 5 ವ್ಯಾಪಾರೀ ಸಮೂಹಗಳ ಪರಿಚಯ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಟಾಟಾ : ಇತ್ತೀಚಿನ ವರದಿಗಳ ಪ್ರಕಾರ, ದೇಶದ ಪ್ರತಿಷ್ಠಿತ ಟಾಟಾ ಸಮೂಹದ ಒಟ್ಟು ಆಸ್ತಿ ಮೌಲ್ಯ 3,71,000 ಕೋಟಿ ರೂಪಾಯಿಗಳಿಗೇರಿದ್ದು ದೇಶದ ಅತೀ ದೊಡ್ಡ ವ್ಯಾಪಾರೀ ಸಮೂಹವಾಗಿ ಹೊರಹೊಮ್ಮಿದೆ. ಈತನಕ ಕೋಟ್ಯಾಧಿಪತಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಅತೀ ದೊಡ್ಡ ವ್ಯಾಪಾರೀ ಸಮೂಹವಾಗಿ ಗುರುತಿಸಲ್ಪಡುತಿತ್ತು. ಈಗ ಇದನ್ನು ಹಿಂದಿಕ್ಕಿರುವ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಮುಂದಿನ ಡಿಸೆಂಬರ್ 2012ರಂದು ನಿವೃತ್ತರಾಗಲಿದ್ದು ಹೊಸ ಮುಖ್ಯಸ್ಥರ ಆಯ್ಕೆ ಆಗಿದೆ. ಉಪ್ಪಿನಿಂದ ಹಿಡಿದು ಸಾಫ್ಟ್ ವೇರ್ ಗಳವರೆಗೆ ಎಲ್ಲಾ ವಸ್ತುಗಳನ್ನು ತಯಾರಿಸುತ್ತಿರುವ ಟಾಟಾ ಸಮೂಹದ 30 ನೊಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 2010ರ ಜುಲೈನಿಂದೀಚೆಗೆ 35,000 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.
ಎರಡನೇ ಸ್ಥಾನದಲ್ಲಿ ರಿಲಯನ್ಸ್ : ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಎರಡು ನೊಂದಾಯಿತ ಕಂಪನಿಗಳನ್ನು ಹೊಂದಿರುವ ಮುಖೇಶ್ ಅಂಬಾನಿಯ ರಿಲಯನ್ಸ್ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯ 3,58,000 ಕೋಟಿ ರೂಪಾಯಿಗಳಾಗಿದ್ದು ಎರಡನೇ ಅತೀ ದೊಡ್ಡ ವ್ಯಾಪಾರೀ ಸಮೂಹವಾಗಿದೆ. ರಿಲಯನ್ಸ್ ನ ಮುಖೇಶ ಹಾಗೂ ಅನಿಲ್ ಅಂಬಾನಿಯ ಒಟ್ಟು ಆಸ್ತಿ ಮೌಲ್ಯವನ್ನು ಪರಿಗಣಿಸಿದರೆ ಟಾಟಾ ಸಮೂಹ ಎರಡನೇ ಸ್ಥಾನಕ್ಕೆ ತಳ್ಳುತ್ತದೆ. ಎರಡೂ ಸಹೋದರರ ಒಟ್ಟು ಆಸ್ತಿ ಮೌಲ್ಯ ಟಾಟಾಗಿಂತ 77,000 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದ್ದು ಒಟ್ಟು 4,47,000 ಕೋಟಿ ರೂಪಾಯಿಗಳಾಗಿವೆ.
ಮೂರನೇ ಸ್ಥಾನದಲ್ಲಿ ಸ್ಟರ್ಲೈಟ್ : ಅನಿವಾಸಿ ಭಾರತೀಯ ಅನಿಲ್ ಅಗರವಾಲ್ ರ ಸ್ಟರ್ಲೈಟ್ ಸಮೂಹ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು ಇದರ ಒಟ್ಟು ಆಸ್ತಿ ಮೌಲ್ಯ 1,35,300 ಕೋಟಿ ರೂಪಾಯಿಗಳಾಗಿವೆ. ಅನಿಲ್ ಅಗರವಾಲ್ ಅವರು ಇಂಗ್ಲೆಂಡ್ ಮೂಲದ ಗಣಿಗಾರಿಕೆ ಮತ್ತು ಲೋಹ ಕಂಪನಿಯಾಗಿರುವ ವೇದಾಂತ ರಿಸೋರ್ಸಸ್ ಕಾರ್ಪೊರೇಷನ್ ನ ಸ್ಥಾಪಕರೂ, ಮುಖ್ಯಸ್ಥರೂ ಆಗಿದ್ದಾರೆ. ವೇದಾಂತ ಸಮೂಹದ ಆಸ್ತಿ ಭಾರತ, ಆಸ್ಟ್ರೇಲಿಯಾ ಮತ್ತು ಜಾಂಬಿಯಾಗಳಲ್ಲಿವೆ. ಅಗರವಾಲ್ ದೇಶದ 10ನೇ ಅತೀ ದೊಡ್ಡ ಶ್ರೀಮಂತರೂ ಆಗಿದ್ದಾರೆ. 2006ರಲ್ಲಿ ಅಗರವಾಲ್ ಅವರು ಒರಿಸ್ಸಾದಲ್ಲಿ 6000 ಎಕರೆ ಪ್ರದೇಶದಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಮಾದರಿಯಲ್ಲೇ ವಿಶ್ವವಿದ್ಯಾಲಯವೊಂದನ್ನು ನಿರ್ಮಿಸಲು ತೊಡಗಿದ್ದು ಇದು 1 ಲಕ್ಷ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿದ್ದು, ಇದಕ್ಕಾಗಿ 1 ಬಿಲಿಯನ್ ಡಾಲರ್ ಹಣ ನೀಡಿದ್ದಾರೆ. ವೇದಾಂತ ಸಮೂಹವನ್ನು 1976ರಲ್ಲಿ ಸ್ಥಾಪಿಸಿದ ಅಗರವಾಲ್ ಈಗ ಸ್ಟರ್ಲೈಟ್ ನ ಮುಖ್ಯಸ್ಥರಲ್ಲದೆ ಬಾಲ್ಕೋ, ಹಿಂದುಸ್ಥಾನ್ ಜಿಂಕ್ ಹಾಗೂ ವೇದಾಂತ ಅಲುಮಿನಾದ ನಿರ್ದೇಶಕರೂ ಆಗಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಎಡಿಎ : ಅಂಬಾನಿಯ ಕಿರಿಯ ಸಹೋದರ ಅನಿಲ್ ಅಂಬಾನಿಯ ಅನಿಲ್ ಧೀರೂಬಾಯಿ ಅಂಬಾನಿ ಸಮೂಹ ಒಟ್ಟು 7 ನೋಂದಾಯಿತ ಕಂಪನಿಗಳನ್ನು ಹೊಂದಿದ್ದು ಇದು ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಎಡಿಎ ಸಮೂಹದ ಒಟ್ಟು ಆಸ್ತಿ ಮೌಲ್ಯ ಕಳೆದ ಜುಲೈ ಅಂತ್ಯಕ್ಕೆ 1,42,400 ಕೋಟಿ ರೂಪಾಯಿಗಳಾಗಿದ್ದು, ಈ ಹಿಂದೆ ಮೂರನೇ ಸ್ಥಾನದಲ್ಲಿತ್ತು. ನಂತರ ವೇದಾಂತ ಸಮೂಹ ಇದನ್ನು ಹಿಂದಿಕ್ಕಿದೆ. ಅನಿಲ್ ಅಂಬಾನಿ ವಿಶ್ವದಲ್ಲಿ 36ನೇ ಅತೀ ದೊಡ್ಡ ಶ್ರೀಮಂತನಾಗಿದ್ದು ಭಾರತದ ನಾಲ್ಕನೇ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.
ಐದನೇ ಸ್ಥಾನದಲ್ಲಿ ಭಾರ್ತಿ : ಐದನೇ ಸ್ಥಾನದಲ್ಲಿ ಸುನೀಲ್ ಮಿತ್ತಲ್ ಸಮೂಹದ ಭಾರ್ತಿ ಸಮೂಹವಿದ್ದು ಇದರ ಮಾರುಕಟ್ಟೆ ಮೌಲ್ಯ 1,20,500 ಕೋಟಿ ರೂಪಾಯಿಗಳಾಗಿವೆ. ಭಾರ್ತಿ ಏರ್ ಟೆಲ್ ನ ಅಧ್ಯಕ್ಷರೂ ಅಗಿರುವ ಸುನೀಲ್ ಮಿತ್ತಲ್ ವಿಶ್ವದ 87ನೇ ಅತೀ ದೊಡ್ಡ ಶ್ರೀಮಂತರಾಗಿದ್ದಾರೆ.
ಈ ಬೃಹತ್ ಸಮೂಹಗಳ ಮಾರುಕಟ್ಟೆ ಮೌಲ್ಯ ನಿತ್ಯದ ಶೇರು ಮಾರುಕಟ್ಟೆಯ ಬೆಲೆಯನ್ನು ಆಧರಿಸಿ ಬದಲಾಗುತ್ತಿದ್ದು, ಸ್ಥಾನಪಲ್ಲಟವೂ ಆಗುತ್ತಿರುತ್ತದೆ. ಇಂದಿಗೂ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ವೈಯಕ್ತಿಕ ಆಧಾರದಲ್ಲಿ ದೇಶದ ಅತೀ ದೊಡ್ಡ ಸಮೂಹವೆಂದು ಗುರುತಿಸಲ್ಪಡುತ್ತಿದೆ.












Click it and Unblock the Notifications