ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವ

By Mahesh
|
Google Oneindia Kannada News

ಮಡಿಕೇರಿ, ಅ.18: ಮುಗಿಲು ಮುಟ್ಟಿದ ಮಂತ್ರಘೋಷ... ಕಾವೇರಿ ತಾಯಿ ಪಾದಾರವಿಂದಗಳಿಗೆ ಗೋವಿಂದಾ...ಗೋವಿಂದಾ... ಎಂಬ ಭಕ್ತರ ಉದ್ಘೋಷ... ತುಂತುರು ಮಳೆ ಹನಿಯ ಸಿಂಚನದ ನಡುವೆ ಲೋಕಪಾವನೆ ಕಾವೇರಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ಸೋಮವಾರ ಮುಂಜಾನೆ 3.11ಕ್ಕೆ ನೆರೆದ ಅಪಾರ ಭಕ್ತವೃಂದಕ್ಕೆ ದರ್ಶನವಿತ್ತಳು ತಾಯಿ ಕಾವೇರಿ.

ಈ ಅಪೂರ್ವ ಘಳಿಗೆ ಘಟಿಸುತ್ತಿದ್ದಂತೆಯೇ ಸುತ್ತಲೂ ನೆರೆದ ಭಕ್ತವೃಂದ ಸ್ನಾನಕೊಳಕ್ಕೆ ಧುಮುಕಿ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು. ಆಗಮಪಂಡಿತರ ಭವಿಷ್ಯದ ಹಿನ್ನಲೆಯಲ್ಲಿ ತಲಕಾವೇರಿಯತ್ತ ಭಕ್ತರ ದಂಡು ಸಹಸ್ರ ಸಂಖ್ಯೆಯಲ್ಲಿ ನೆರೆದಿತ್ತು. ಭಾನುವಾರ ಸಂಜೆಯೇ ದೂರದ ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು.

ಮಡಿಕೇರಿಯಲ್ಲಿ ರಾತ್ರಿ ದಸರಾವಿದ್ದ ಕಾರಣ ದಸರಾಕ್ಕೆ ಬಂದಿದ್ದ ಹೆಚ್ಚಿನ ಪ್ರವಾಸಿಗರು ತಲಕಾವೇರಿಗೆ ಆಗಮಿಸಿ ತೀರ್ಥೋದ್ಭವದ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಸ್ವಸ್ತಿ ಶ್ರೀ ವಿಕೃತಿ ನಾಮ ಸಂವತ್ಸರದ ದಕ್ಷಿಣಾಯನ ಶರದೃತುವಿನ ಶುಭಘಳಿಗೆ ಸೋಮವಾರ ಪ್ರಾತಃಕಾಲ 3.11ಕ್ಕೆ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ ಘಟಿಸಿತು.
ಈ ಸಂದರ್ಭ ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳಕ್ಕೆ ಧುಮುಕಿದ ಭಕ್ತರು ತಾವು ತಂದಿದ್ದ ಬಿಂದಿಗೆ, ಕ್ಯಾನ್ ಮುಂತಾದ ಪಾತ್ರೆಗಳಲ್ಲಿ ತೀರ್ಥವನ್ನು ತುಂಬಿಸಿಕೊಂಡರು.

ತಲಕಾವೇರಿಯಲ್ಲಿ ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಮಿಳುನಾಡು, ಮಂಡ್ಯ ಅನ್ನಸಂತರ್ಪಣ ಸಮಿತಿ ಹಾಗೂ ಕೊಡಗು ಏಕೀಕರಣ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತೀರ್ಥೋದ್ಭವದ ಬಳಿಕ ವಿಶೇಷ ಪೂಜೆಗಳು ನಡೆಯುತ್ತಿದ್ದು, ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ತೀರ್ಥವನ್ನು ಕೊಂಡೊಯ್ಯುತ್ತಿದ್ದಾರೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಕಾವೇರಿ ನದಿ ತೀರದಲ್ಲಿ ಹಿರಿಯರಿಗೆ ಪಿಂಡ ಸಮರ್ಪಣೆಯಲ್ಲಿ ನಿರತರಾದ ದೃಶ್ಯ ಕಂಡು ಬರುತ್ತಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X