90 ಸಾವಿರ ಟೆಕ್ಕಿಗಳ ನೇಮಕ : ನಾಸ್ಕಾಮ್

ನೌಕರರ ವಲಸೆ ನಡುವೆ ವೇತನ, ಭತ್ಯೆಗಳು ಗಣನೀಯವಾಗಿ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಆರ್ಥಿಕ ಹಿಂಜರಿತದಿಂದ ಚೇತರಿಕೆ ಕಂಡಿರುವ ದೇಶೀಯ ಐಟಿ ಕ್ಷೇತ್ರ, ಈ ವರ್ಷ ಬೃಹತ್ ಪ್ರಮಾಣದ ನೌಕರರ ನೇಮಕಕ್ಕೆ ಮುಂದಾಗಿದೆ. ದೇಶದ ಪ್ರಮುಖ ಐಟಿ ಸಂಸ್ಥೆಗಳಾದ ಟಾಟಾ ಕನ್ಸ್‌ಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೊ ಮೊದಲಾದ ಸಂಸ್ಥೆಗಳು ಈ ವರ್ಷ 90,000 ನೌಕರರ ನೇಮಕಕ್ಕೆ ಅಣಿಯಾಗಿವೆ.
ಕಳೆದ ವರ್ಷ 20,000 ನೌಕರರಿಗೆ ಉದ್ಯೋಗ ನೀಡಿದ್ದವು ಎಂದು ನಾಸ್ಕಾಮ್ ವರದಿ ಹೇಳಿದೆ. ಸೆಪ್ಟೆಂಬರ್‌ನಲ್ಲಿ ಐಟಿ ಕ್ಷೇತ್ರ ಗರಿಷ್ಠ ಪ್ರಮಾಣದ ನೌಕರರನ್ನು ನೇಮಕ ಮಾಡಿಕೊಂಡಿದೆ. ನೌಕರರ ನೇಮಕ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಅಮೆರಿಕ ಆರ್ಥಿಕ ಹಿಂಜರಿತದ ನಂತರ ಮೊದಲ ಸಲ ಐಟಿ ಕ್ಷೇತ್ರ ಬೃಹತ್ ಪ್ರಮಾಣದ ನೇಮಕಕ್ಕೆ ಚಾಲನೆ ನೀಡಿದೆ.
ಇದು ಐಟಿ ಕ್ಷೇತ್ರದಲ್ಲಿ ಗರಿಷ್ಠ ದಾಖಲೆ. ನವೆಂಬರ್‌ವರೆಗೆ ನೇಮಕ ಪ್ರಕ್ರಿಯೆ ಇದೇ ಗತಿಯಲ್ಲಿ ಮುಂದುವರಿಯಲಿದೆ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಐಟಿ ಕ್ಷೇತ್ರ ಶೇ. 20-22ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಮಾ ಫಾ ಸಂಸ್ಥೆಯ ನಿರ್ದೇಶಕ ಇ.ಬಾಲಾಜಿ ಹೇಳಿದ್ದಾರೆ. 2008ರವರೆಗೆ ವಲಸೆ ಪ್ರಮಾಣ ಶೇ.15ರಷ್ಟಿತ್ತು.
ಈಗ ಶೇ. 20-30ಕ್ಕೆ ನಿಯಂತ್ರಿಸಲು ಕೆಲ ಸಂಸ್ಥೆಗಳು ಪರದಾಡುತ್ತಿವೆ. ಜೆಪಿ ಮಾರ್ಗಾನ್, ಸಿಟಿ ಬ್ಯಾಂಕ್ ಮತ್ತು ಜಿಇ ಮೊದಲಾದ ಬೃಹತ್ ಗ್ರಾಹಕರು ಐಬಿಎಂ, ಆಕ್ಸೆಂಚರ್ ಮೊದಲಾದ ಸಂಸ್ಥೆಗಳಿಗೆ ಗಣನೀಯ ಪ್ರಮಾಣದ ಯೋಜನೆಗಳನ್ನು ನೀಡುತ್ತಿವೆ. ಹೊಸ ಹೊರಗುತ್ತಿಗೆಗಳಿಗೆ ಅನುಗುಣವಾಗಿ ಕಂಪನಿಗಳು ನೇಮಕ ಪ್ರಮಾಣ ಏರಿಸುತ್ತಿವೆ.
ಎಂಫಾಸಿಸ್, ಕಳೆದ ತ್ರೈಮಾಸಿಕದಲ್ಲಿ 38,275 ನೌಕರರನ್ನು ಹೊಂದಿರುವುದಾಗಿ ಘೋಷಿಸಿದೆ. 1,156 ನೌಕರರನ್ನು ಕಳೆದ ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಂಡಿದೆ. 2,000ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿರುವುದಾಗಿ ಹೇಳಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೊ ಮೊದಾಲಾದವು ವರ್ಷದ ಆರಂಭದಲ್ಲೇ ನೇಮಕ ಗುರಿ ಪ್ರಕಟಿಸಿವೆ.












Click it and Unblock the Notifications