ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರ ಸವಾಲು ಸ್ವೀಕರಿಸಿದ ಯಡಿಯೂರಪ್ಪ

By Prasad
|
Google Oneindia Kannada News

Yeddyurappa accepts Governor's challenge
ಬೆಂಗಳೂರು, ಅ. 12 : ವಿಧಾನಸಭೆಯಲ್ಲಿ ಎರಡನೇ ಬಾರಿ ಬಹುಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲರ ಸವಾಲನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸ್ವೀಕರಿಸಿದ್ದಾರೆ. ಅಕ್ಟೋಬರ್ 14ರಂದು ಬೆಳಿಗ್ಗೆ 11ಗಂಟೆಗೆ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸಲಾಗಿದೆ.

ಸಂಜೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರ ಮನೆಯಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಿರಿಯ ಧುರೀಣರು ಚರ್ಚೆ ನಡೆಸಿದ ನಂತರ ಈ ನಿರ್ಣಯಕ್ಕೆ ಬರಲಾಗಿದೆ. ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ನೀಡದೆ ಬಹುಮತ ಸಾಬೀತುಪಡಿಸುವುದೇ ಜಾಣ ನಡೆ ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಈ ಕುರಿತಾಗಿ ಮುಖ್ಯಮಂತ್ರಿ ಕಚೇರಿಯಿಂದಲೂ ಆದೇಶ ಹೊರಬಿದ್ದಿದೆ.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ ಮರುದಿನ ಮತ್ತೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿದ್ದಕ್ಕೆ ನವದೆಹಲಿಗೆ ತೆರಳಿದ್ದ ಯಡಿಯೂರಪ್ಪ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ಬಹುಮತ ಈಗಾಗಲೆ ಸಾಬೀತುಪಡಿಸಲಾಗಿದೆ, ಮತ್ತೇಕೆ ಎರಡನೇ ಅವಕಾಶ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ, ಭಿನ್ನಮತೀಯರ ಅನರ್ಹತೆ ಕುರಿತ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿರುವುದು ಮತ್ತು ಪಕ್ಷೇತರರ ವಿಚಾರಣೆ ಮುಂದೂಡಿದ್ದು ಯಡಿಯೂರಪ್ಪನವರಲ್ಲಿ ಸ್ಫೂರ್ತಿಯನ್ನು ಮರಳಿ ತರಿಸಿದೆ.

ಅ. 14ರಂದು ವಿಶ್ವಾಸಮತ ಯಾಚಿಸುವುದು ಖಚಿತವಾಗಿರುವುದರಿಂದ ಎಲ್ಲ ಬಿಜೆಪಿ ಶಾಸಕರು ನವದೆಹಲಿಯಿಂದ ಇಂದು ಸಂಜೆ 8 ಗಂಟೆಗೆ ಬೆಂಗಳೂರಿಗೆ ಮರಳಿ ಬರಲಿದ್ದಾರೆ.

ರಾಜ್ಯಪಾಲರ ಬಳಿ ಜೆಡಿಎಸ್, ಕಾಂಗ್ರೆಸ್ : ಶಾಸಕರ ಅನರ್ಹತೆ ಕುರಿತ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕಾಯ್ದಿರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಯಡಿಯೂರಪ್ಪನವರು ಸವಾಲನ್ನು ಸ್ವೀಕರಿಸಿದ್ದು ಒಂದು ಕಾರಣವಾದರೆ, ವಿಶ್ವಾಸಮತ ವಿರೋಧಿಸಲು ಬಲವರ್ಧನೆಗೆ ಕಾರ್ಯತಂತ್ರ ರೂಪಿಸಲು ಎರಡು ಪಕ್ಷಗಳು ನಿರತವಾಗಿವೆ.

ಈಗಾಗಲೆ ಕಾಂಗ್ರೆಸ್ ನಾಯಕರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಕಾರ್ಯಾದ್ಯಕ್ಷ ಡಿಕೆ ಶಿವಕುಮಾರ್ ಮೊದಲಾದವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಎಂಸಿ ನಾಣಯ್ಯ ಮುಂತಾದವರು ಸೇರಿಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಎರಡೂ ಪಕ್ಷಗಳ ಬಲಾಬಲ : ಅನರ್ಹಗೊಂಡ 11 ಬಿಜೆಪಿ ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿ 106 ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ 73 ಮತ್ತು ಜೆಡಿಎಸ್ 28 ಶಾಸಕರ ಬಲ ಪಡೆದಿದೆ. ಇವೆರಡು ಪಕ್ಷಗಳ ಒಟ್ಟು ಸಂಖ್ಯೆ 101. ಬಹುಮತ ಸಾಬೀತಿಗೆ ಬೇಕಿರುವ ಕನಿಷ್ಠ ಸಂಖ್ಯೆ 103. ಇದರಲ್ಲಿ ಕುಮಾರಸ್ವಾಮಿಯಿಂದ 'ಕಳಪೆ ವಜ್ರ' ಎಂದು ಹೊಗಳಿಸಿಕೊಂಡಿದ್ದ ಜೆಡಿಎಸ್ ನ ಚನ್ನಪಟ್ಟಣದ ಶಾಸಕ ಎಂಸಿ ಅಶ್ವತ್ಥ್ ಅವರು ಜನಾರ್ದನ ರೆಡ್ಡಿ ಮನೆಯಲ್ಲಿ ಕಾಣಿಸಿಕೊಂಡಿದ್ದು ಕುದುರೆ ವ್ಯಾಪಾರ ಕುದುರಿಕೊಂಡಿದ್ದಕ್ಕೆ ಸಾಕ್ಷಿ ಒದಗಿಸಿದೆ. ಜೊತೆಗೆ ಕಾಂಗ್ರೆಸ್ 8ರಿಂದ 10 ಶಾಸಕರು ಕೂಡ ವಿಶ್ವಾಸಮತದಂದು ಗೈರಾಗಬಹುದೆಂಬ ಸಂಗತಿ ರಾಜಕೀಯ ಅಂಗಳದಲ್ಲಿ ಸುಳಿದಾಡುತ್ತಿರುವುದ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಪತ್ರಕರ್ತರಿಂದ ಪ್ರತಿಭಟನೆ : ಅ.11ರಂದು ವಿಧಾನಸಭೆಯಲ್ಲಿ ಪೊಲೀಸರಿಂದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೆಂಗಳೂರು ವರದಿಗಾರರ ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ. ಕಬ್ಬನ್ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಅ.13, ಬುಧವಾರದಂದು ಪ್ರತಿಭಟನೆ ನಡೆಯಲಿದೆ ಕೂಟ ಪ್ರಕಟಣೆಯಲ್ಲಿ ಹೇಳಿದೆ.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X