ರಾಜ್ಯಪಾಲರ ವಿರುದ್ಧ ಹರಿಹಾಯ್ದ ಯಡಿಯೂರಪ್ಪ

ಅತ್ಯಂತ ಹಿರಿಯರಾದ ಭಾರದ್ವಾಜ್ ಅವರಿಂದ ಈ ಬಗೆಯ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷರಾಗಿ ಕೆಜಿ ಬೋಪಯ್ಯ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಕರ್ತವ್ಯ ನಿರ್ವಹಣೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮಾಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಯಡಿಯೂರಪ್ಪ ನುಡಿದರು. ಈ ಎಲ್ಲ ಗೊಂದಲಗಳಿಗೆ ರಾಜ್ಯಪಾಲರೇ ಕಾರಣ. ಕೇಂದ್ರ ಕೂಡಲೆ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಕೇಂದ್ರವನ್ನು ಆಗ್ರಹಿಸಿದರು.
ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷ ಬಹುಮತ ಸಾಬೀತುಪಡಿಸಿದೆ. ವಿರೋಧ ಪಕ್ಷಗಳು ಬೇಕಿದ್ದರೆ ಇದನ್ನು ವಿರೋಧಿಸಿ ಕೋರ್ಟಿಗೆ ಹೋಗಬಹುದು ಎಂದು ಅವರು ಪ್ರತಿಪಕ್ಷಗಳನ್ನು ಪಂಥಕ್ಕೆ ಆಹ್ವಾನಿಸಿದರು.
ಇಂದು ನಡೆದ ಘಟನಾವಳಿಗಳ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ವಿವರಣೆ ನೀಡಲಾಗುವುದು ಮತ್ತು ಅವರೊಂದಿಗೆ ಸಮಾಲೋಚಿಸಿ ಸದ್ಯದಲ್ಲಿಯೇ ಸಂಪುಟ ವಿಸ್ತರಣೆಯನ್ನೂ ಮಾಡಲಾಗುವುದು. ಎಂದಿನಂತೆ ನಡೆದುಕೊಂಡು ಬಂದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಅವರು ಹೇಳಿದರು.
ಸದ್ಯಕ್ಕೆ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಇಂದು ಸದನದಲ್ಲಿ ನಡೆದ ವಿದ್ಯಮಾನಗಳ ಕುರಿತು ವಿಸ್ತೃತವಾದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಕರ್ನಾಟಕದ ರಾಜಕೀಯ ಬೆಳವಣಿಗಳ ಕುರಿತು ಚರ್ಚಿಸಲು ಕೇಂದ್ರ ಸಂಪುಟ ಸಭೆ ನಡೆಯಲಿದೆ. ಈ ನಡುವೆ, ಬಹುಮತ ಸಾಬೀತುಪಡಿಸಿ ಬೀಗುತ್ತಿರುವ ಬಿಜೆಪಿ ಶಾಸಕರು ಮತ್ತೆ ರೆಸಾರ್ಟಿಗೆ ಮೊರೆಹೋಗಿದ್ದಾರೆ.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications