ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆಯಲ್ಲಿ ಕಾನೂನು ಹೃದಯದಲ್ಲಿ ನ್ಯಾಯ ಇರಬೇಕು

By Prasad
|
Google Oneindia Kannada News

Veerappa Moily, Justice Khehar, BS Yeddyurappa
ಚಿಕ್ಕಬಳ್ಳಾಪುರ, ಅ. 2 : ಪ್ರಕರಣಗಳನ್ನು ಕೈಗೆತ್ತ್ತಿಕೊಳ್ಳುವಾಗ ಕಕ್ಷಿಗಾರರ ಕಿಸೆಯನ್ನು ನೋಡಬೇಡಿ, ಅವರ ಕಣ್ಣುಗಳನ್ನು ನೋಡಿ. ತಲೆಯಲ್ಲಿ ಕಾನೂನು ಇದ್ದರೂ ಹೃದಯದಲ್ಲಿ ನ್ಯಾಯ ಇರಬೇಕು. ನ್ಯಾಯ ಅರಸಿ ಬರುವವರಿಗೆ ಕ್ಷಿಪ್ರವಾಗಿ ಹಾಗೂ ಸುಲಭವಾಗಿ ನ್ಯಾಯ ದೊರೆಯಬೇಕು ಎಂಬುದು ವಕೀಲರ ಮೂಲ ಮಂತ್ರವಾಗಬೇಕು ಎಂದು ವಕೀಲರಿಗೆ ಹಿತನುಡಿ ಕೇಂದ್ರ ಕಾನೂನು ಸಚಿವ ಡಾ. ವೀರಪ್ಪ ಮೊಯಿಲಿ ಹೇಳಿದ್ದಾರೆ.

ದೇವನಹಳ್ಳಿಯ ವಕೀಲರ ಸಂಘದ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದ ಅವರು, ರಾಷ್ಟ್ರದ ಎಲ್ಲಾ ಅಧೀನ ನ್ಯಾಯಾಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು 11000 ಕೋಟಿ ರು. ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಭೂತ ಸೌಲಭ್ಯ ಕೇವಲ ಕಟ್ಟಡ ಹಾಗೂ ಪೀಠೋಪಕರಣಗಳಿಗೆ ಸೀಮಿತವಾಗದೆ, ನ್ಯಾಯಾಧೀಶರು ಹಾಗೂ ವಕೀಲರಿಗೆ ವೃತ್ತಿ ತರಬೇತಿ ನೀಡಿ, ಅವರನ್ನು ಪರಿಪಕ್ವಗೊಳಿಸುವ ಮಹತ್ತರ ಯೋಜನೆಯಾಗಿದೆ ಎಂದರು.

ಅಲ್ಲದೆ, ಕೇಂದ್ರ ಯೋಜನಾ ಆಯೋಗದ ಸಮ್ಮತಿಯೊಂದಿಗೆ ರಾಷ್ಟ್ರದ ಎಲ್ಲಾ ಉಚ್ಛ ನ್ಯಾಯಾಲಯಗಳ ಮೂಲಭೂತ ಸೌಲಭ್ಯಗಳನ್ನು ಉನ್ನತೀಕರಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಅದರಂತೆ, ಉಚ್ಛ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ತಗಲುವ ಒಟ್ಟಾರೆ ವೆಚ್ಚದ ಶೇಕಡಾ 70ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ. ಉಳಿದ ಶೇಕಡಾ 30ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಅನುದಾನ ರೂಪದಲ್ಲಿ ಒದಗಿಸಲಿದೆ ಎಂದು ತಿಳಿಸಿದರು.

ಖೇಹರ್ ಕಳವಳ : ಇದೇ ಸಂದರ್ಭದಲ್ಲಿ 51 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ದೇವನಹಳ್ಳಿಯ ನ್ಯಾಯಾಲಯ ಸಂಕೀರ್ಣದ ಮೊದಲನೇ ಮಹಡಿಯನ್ನು ಉದ್ಘಾಟಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರು ಮಾತನಾಡಿ ನ್ಯಾಯಾಲಯಗಳಲ್ಲಿ ವಕೀಲರು ವಕೀಲರತ್ತ ನೋಡುತ್ತಾರೆ, ನ್ಯಾಯಾಧೀಶರು ನ್ಯಾಯಾಧೀಶರತ್ತ ನೋಡುತ್ತಾರೆ. ಆದರೆ, ನ್ಯಾಯ ಅರಸಿ ಬಂದ ಬಡ ಕಕ್ಷಿಗಾರನತ್ತ ಯಾರೂ ನೋಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸುಮಾರು ಮೂವತ್ತು ವರ್ಷಗಳ ಹಿಂದೆ ವಕೀಲರಾಗಿ ತಮ್ಮ ವೃತ್ತಿ ಜೀವನದಲ್ಲಿ ಕೈಗೆತ್ತಿಕೊಂಡ ಪ್ರಪ್ರಥಮ ಪ್ರಕರಣದಲ್ಲಿ ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ಏಳು ಮಕ್ಕಳ ಪಾಲನೆಯ ಜವಾಬ್ದಾರಿ ಹೊತ್ತ ವಿಧವೆಯಿಂದ ಐದು ನೂರು ರು. ಸಂಭಾವನೆ ಪಡೆದ ನಾನು ಈ ಮಟ್ಟ ತಲುಪಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದೇನೆ. ಆದರೆ, ಆ ತಾಯಿಯ ಸ್ಥಿತಿಗತಿ ಏನಾಯಿತು? ಎಂಬ ಪ್ರಶ್ನೆ ನನ್ನನ್ನು ಹಲವೊಮ್ಮೆ ಕಾಡಿದೆ ಎಂದು ಭಾವುಕರಾಗಿ ನುಡಿದ ಅವರು ನ್ಯಾಯಾಂಗ ವಿತರಣಾ ವ್ಯವಸ್ಥೆ ಪರಿಶುದ್ಧ, ಪಾರದರ್ಶಕ, ಪ್ರಾಮಾಣಿಕ ಹಾಗೂ ಕ್ಷಿಪ್ರವಾಗಿರಬೇಕು ಎಂದು ಆಶಿಸಿದರು.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X