ಕಾನೂನು ಕೈಗೆತ್ತಿಕೊಂಡ್ರೆ ಹುಷಾರ್ :ಡಿಜಿ-ಐಜಿಪಿ

ಬೆಂಗಳೂರಿನ ಡಿಜಿಪಿ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ನಿರ್ದೇಶಕ ಎ ಆರ್ ಇನ್ಫಂಟ್, ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಅಯೋಧ್ಯೆ ತೀರ್ಪು ನಾಳೆ ಘೋಷಣೆಯಾಗಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆ ಕೆಲ ನೀತಿ ನಿಯಮಗಳನ್ನು ರೂಪಿಸಿದೆ. ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನೆ, ಮೆರವಣಿಗೆ ಸೇರಿ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಕೆಲ ಸಮಾಜ ವಿರೋಧಿ ಶಕ್ತಿಗಳು ಗೊಂದಲ ಸೃಷ್ಟಿಸುವ ಸಾಧ್ಯತೆ ಇದ್ದು, ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬಾರದು. ಆಯಾ ಜಿಲ್ಲೆಗಳಲ್ಲಿ ಪೊಲೀಸ್ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳ ಶಾಂತಿ ಸಭೆಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಇಂದು ಸಂಜೆಯಿಂದಲೇ ಮಧ್ಯ ಮಾರಾಟವನ್ನು ಬಂದ್ ಮಾಡಲಾಗುವುದು ಎಂದು ಅಜಯ್ ಕುಮಾರ್ ಸಿಂಗ್ ವಿವರಿಸಿದರು.
ಭದ್ರತೆಗಾಗಿ ರಾಜ್ಯಾದ್ಯಂತ 50 ಸಾವಿರ ಪೊಲೀಸರು ನಿಯೋಜನೆ. 200 ಕೆಎಸ್ ಆರ್ ಪಿ ತುಕಡಿ, ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗುವುದು. ಸೂಕ್ಷ್ಮ ಪ್ರದೇಶಗಳು ಎನ್ನಲಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಬೆಂಗಳೂರಿನಲ್ಲಿ 20 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅಜಯ್ ಕುಮಾರ್ ಸಿಂಗ್ ಹೇಳಿದರು.











Click it and Unblock the Notifications