ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಮದ್ಯ ತಡೆಗೆ ಜನಜಾಗೃತಿ: ರೇಣುಕಾ

By Mahesh
|
Google Oneindia Kannada News

Excise revenue increasing, Renukacharya
ಕಾರವಾರ-25 : ರಾಜ್ಯದಲ್ಲಿ ಕಳ್ಳಭಟ್ಟಿ ಹಾಗೂ ನಕಲಿ ಮದ್ಯ ತಡೆಗೆ ಅಬಕಾರಿ ಇಲಾಖೆ ವತಿಯಿಂದ ಕಡ್ಡಾಯವಾಗಿ ಗ್ರಾಮಸಭೆ ಜರುಗಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ಅವರು ತಿಳಿಸಿದರು. ನಕಲಿ ಹಾಗೂ ಕಳ್ಳಭಟ್ಟಿ ಮದ್ಯ ತಡೆಗೆ ಸಾರ್ವಜನಿಕರ ಸಹಾಯ-ಸಹಕಾರ ಅಗತ್ಯ. ಇದರ ತಡೆಗೆ ಪ್ರತಿ ಗ್ರಾಮದಲ್ಲ್ಲೂ ಹಾಗೂ ಗ್ರಾಮ ಪಂಚಾಯತನಲ್ಲೂ ಗ್ರಾಮಸಭೆ ಜರುಗಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೂ ತಾವು ಭೇಟಿ ನೀಡುತ್ತಿರುವುದಾಗಿ ಅವರು ತಿಳಿಸಿದರು. ಮದ್ಯ ಜಪ್ತಿ ಪ್ರಕರಣಗಳಲ್ಲಿ ವಶಪಡಸಿಕೊಂಡ ವಾಹನಗಳನ್ನು ಆರೋಪ ಸಾಬೀತಾದ ತಕ್ಷಣವೇ ಹರಾಜು ಮಾಡುವಂತೆ ಸೂಚಿಸಿದೆ. ಸರ್ಕಾರಕ್ಕೆ ಒಟ್ಟು 423 ಕೋಟಿ ರೂ. ಅಬಕಾರಿ ಬಾಕಿ ಬರಬೇಕಿದ್ದು ಅಗಸ್ಟ್ ಕೊನೆಯೊಳಗೆ ಬಾರದಿದ್ದಲ್ಲಿ ಗುತ್ತಿಗೆದಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ಅವರು ತಿಳಿಸಿದರು.

ಕಳೆದ ವರ್ಷ ಅಬಕಾರಿ ಇಲಾಖೆಯಿಂದ ಒಟ್ಟು 6,700 ಕೋಟಿ ರೂ. ಆದಾಯ ಗುರಿ ನಿಗದಿಯಾಗಿತ್ತು. ಆದರೆ 7,500 ಕೋಟಿ ರೂ ಆದಾಯ ಬಂದಿತ್ತು. ಈ ಬಾರಿ 7,500 ಕೋಟಿ ರೂ. ನಿಗದಿ ಮಾಡಿದ್ದು 8,500 ಕೋಟಿ ರೂ. ಸಾಧಿಸುವ ನಿರೀಕ್ಷೆಯಿದೆ. ಕಳ್ಳ ಭಟ್ಟಿ ಹಾಗೂ ನಕಲಿ ಹಾಗೂ ಪರವಾನಗಿ ರಹಿತ (ಸೆಕೆಂಡ್) ಮದ್ಯ ತಡೆಯಿಂದಾಗಿ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತಿದೆಯೆಂದರು.

ಸರಾಯಿ ನಿಷೇಧದಿಂದ ಆದಾಯ ಹೆಚ್ಚಳ: ಗೋವಾದಿಂದ ಬರುವ ಮದ್ಯವನ್ನು ಸಂಪೂರ್ಣವಾಗಿ ತಡೆಯುವಂತೆ ಹಾಗೂ ಗೋವಾ ಗಡಿಯ 12 ಸ್ಥಳಗಳಿಂದ ಸರಬರಾಜು ಆಗುತ್ತಿದೆಯೆನ್ನಲಾದ ಅಕ್ರಮ ಮದ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸರಾಯಿ ನಿಷೇಧದಿಂದ ಸರಕಾರಕ್ಕೆ ಆದಾಯ ಹೆಚ್ಚಿದೆ. ಹಾಗೂ ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಸಮಾಜಕಲ್ಯಾಣ ಇಲಾಖೆಯಿಂದ ಯೋಜನೆಗಳನ್ನು ರೂಪಿಸಲಾಗಿದೆಯೆಂದರು.

ಗೋವಾದಲ್ಲಿ ಗೇರು ಹಣ್ಣಿನಿಂದ ರಸ ತೆಗೆದು ಹುರಾಕ್ ಹಾಗೂ ಫೆನ್ನಿ ತಯಾರಿಸುವಂತೆ ರಾಜ್ಯದಲ್ಲಿಯೂ ಈ ಕುರಿತು ಚರ್ಚಿಸಲಾಗುವುದೆಂದರು. ನಂತರ ಗೋವಾ ಗಡಿಯಲ್ಲಿರುವ ಅಬಕಾರಿ ತಪಾಸಣಾ ನಾಕಾಗೆ ಭೇಟಿ ನೀಡಿದ ಸಚಿವರು ಅಲ್ಲಿ ವಶಪಡಿಸಿಕೊಂಡು ಸಂಗ್ರಹಿಸಲಾಗಿದ್ದ ಅಕ್ರಮ ಮದ್ಯ(ಸುಮಾರು 4,100 ಲೀ)ವನ್ನು ನಾಶಪಡಿಸಿದರಲ್ಲದೇ ಬಿಗಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಸೋಮಯ್ಯ ಬಸವರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X