ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಿಯುತ್ತಿರುವ ವರ್ಷಧಾರೆ : ಮೈದುಂಬಿದ ಹಾರಂಗಿ

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Harangi Dam
ಮಡಿಕೇರಿ, ಜು. 29 : ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕುಶಾಲನಗರ ಬಳಿಯ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಬುಧವಾರ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‌ಗಳಿಂದ ನದಿಗೆ ನೀರನ್ನು ಬಿಡಲಾಗುತ್ತಿದೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 2859 ಅಡಿ ಇದ್ದು, ಈಗಿನ ನೀರಿನ ಮಟ್ಟ 2854.15 ಅಡಿಗಳಷ್ಟಿದೆ. ಬುಧವಾರ ಸಂಜೆ 7 ಗಂಟೆಗೆ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ನಾಲ್ಕು ಗೇಟ್‌ಗಳಿಂದ 9000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಯಿತು. ಜಲಾಶಯದ ಭದ್ರತೆ ದೃಷ್ಠಿಯಿಂದ ನೀರಿನ ಮಟ್ಟವನ್ನು 2854 ಅಡಿಗಳಿಗೆ ಕಾಯ್ದಿರಿಸಿ, ಹೆಚ್ಚಿನ ನೀರನ್ನು ಹರಿಯಬಿಡಲಾಗುತ್ತಿದೆ.

ಹಾರಂಗಿ ಜಲಾಶಯ 8.5 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಇದೀಗ 6.8 ಟಿ.ಎಂ.ಸಿ.ಗಳಷ್ಟು ನೀರು ಶೇಖರಣೆಯಾಗಿದೆ. ಜಲಾಶಯದ ಕ್ರೆಸ್ಟ್ ಗೇಟ್‌ಗಳ ಮೂಲಕ ಹಾಲಿನ ನೊರೆಯಂತೆ ಧುಮ್ಮಿಕ್ಕುವ ನೀರಿನ ನಯನಮನೋಹರ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡು ಇತ್ತ ಹರಿದು ಬರತೊಡಗಿದೆ. ಜಲಾಶಯದಿಂದ ನೀರು ಹರಿಸುವ ಮುನ್ನ ತಗ್ಗುಪ್ರದೇಶದ ಜನರಿಗೆ ಮೀನುಗಾರರಿಗೆ, ನದಿಯ ಅಸುಪಾಸಿನಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲು ಮೂರು ಭಾರಿ ಸೈರನ್ ಮೊಳಗಿಸಲಾಯಿತು.

ಜಲಾಶಯದಿಂದ ನೀರನ್ನು ನದಿಗೆ ಬಿಟ್ಟ ವಿಷಯ ತಿಳಿದ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ವೀಕ್ಷಿಸಿ ಸಂಭ್ರಮಿಸಿದರು. ಈ ಭಾರಿ ಮಳೆಯ ಹಿನ್ನೆಡೆಯಿಂದ ಕಂಗಾಲಾಗಿದ್ದ ಕಾವೇರಿ ಜಲಾನಯನ ವ್ಯಾಪ್ತಿಯ ರೈತರು ಜಲಾಶಯ ಭರ್ತಿಯಾಗಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಜಲಾಶಯ ಜುಲೈ 17 ರಂದು ಭರ್ತಿಯಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X