ಪಾದಯಾತ್ರೆ : ಸೋನಿಯಾ ಗಾಂಧಿ ಅವರ ಅಪರೇಷನ್ ಬಳ್ಳಾರಿ

ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ ಪಾದಯಾತ್ರೆ ಹೋರಾಟ ಶುರುವಾಗಿದೆ. ದಿಲ್ಲಿ ಮೇಡಮ್ ಅಣತಿಯಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರಿಡಂ ಪಾರ್ಕ್ ನಿಂದ ಪಾದಯಾತ್ರೆಗೆ ಅಬ್ಬರದ ಚಾಲನೆ ದೊರೆತಿದೆ. ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐ ವಹಿಸಲೇಬೇಕು ಎನ್ನುವ ಏಕೈಕ ಗುರಿಯೊಂದಿಗೆ ಕೈ ಪಡೆ 16 ದಿನಗಳ ಕಾಲ ಸುಮಾರು 320 ಕಿಮೀ ದೂರ ನಡೆಯುವ ಸಾಹಸಕ್ಕೆ ಕೈಹಾಕಿದೆ.
ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ತಲಾ 50 ಸಾವಿರ ಮಂದಿಯನ್ನು ಸೇರಿಸುವುದು. ಆಗಸ್ಟ್ 9ರಂದು ಬಳ್ಳಾರಿಯಲ್ಲಿ ಐತಿಹಾಸಿಕ ಸಮಾವೇಶ ಏರ್ಪಡಿಸುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನದ ಮೂಲಕ ಗಣಿ ಹಗರಣದ ಸಿಬಿಐ ತನಿಖೆಗೆ ಮೂಲಕ ಸರಕಾರದ ಮೇಲೆ ಒತ್ತಡ ತರುವುದು, ರಾಜ್ಯದ ನೈಸರ್ಗಿಕ ಸಂಪನ್ಮೂಲ ಲೂಟಿಯಾಗುತ್ತಿರುವುದನ್ನು ತಡೆಯುವುದು. ಹಾಗೂ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಖಾಡಕ್ಕೆ ವೇದಿಕೆ ಸಿದ್ಧಗೊಳಿಸುವುದು. ಮತ್ತು ಉತ್ತರ ಕರ್ನಾಟಕದಲ್ಲಿ ಕುಸಿದು ಕುಂತಿರುವ ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ ನೀಡುವ ಸಂಗತಿಯೂ ಪಾದಯಾತ್ರೆಯಲ್ಲಿ ಅಡಗಿದೆ.
ಗಣಿಗಾರಿಕೆ ರಾಷ್ಟ್ರೀಯ ಸಮಸ್ಯೆ. ಕರ್ನಾಟಕದಲ್ಲಿ ಬಿಜೆಪಿಗೆ ಮಣ್ಣು ಮುಕ್ಕಿಸಬೇಕು, ಗಣಿಯಿಂದ ಕೊಬ್ಬಿರುವ ರೆಡ್ಡಿಗಳ ಸೊಕ್ಕಡಗಿಸಬೇಕು ಎನ್ನುವುದು ಕಾಂಗ್ರೆಸ್ಸಿಗರ ಹಳೆಯ ಕನಸು. ಇಂತಹ ಸಮಯವನ್ನು ಕಾಯುತ್ತಿದ್ದ ಮೇಡಮ್ ಸೋನಿಯಾ ಗಾಂಧಿ, ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಬಳ್ಳಾರಿಯಲ್ಲಿ ನಡೆಯುವ ಸಮಾವೇಶಕ್ಕೆ ಕೈ ಪಡೆಯ ರಾಷ್ಟ್ರೀಯ ನಾಯಕರ ದಂಡು ಲಗ್ಗೆ ಇಟ್ಟರೂ ಅಚ್ಚರಿಯಿಲ್ಲ. ಸ್ವತಃ ಸೋನಿಯಾ ಗಾಂಧಿ ಪಾದಯಾತ್ರೆಗೆ ಆಸಕ್ತಿ ವಹಿಸಿರುವುದರಿಂದ ಹೋರಾಟ ಭಾರಿ ಮಹತ್ವ ಪಡೆದುಕೊಂಡಿರುವುದಂತೂ ನಿಜ. ರಾಹುಲ್ ಗಾಂಧಿ ರಾಜ್ಯಕ್ಕೆ ಕಾಲಿಟ್ಟರೆ ಚಳವಳಿ ಮಹತ್ವದ ತಿರುವು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಆಗಸ್ಟ್ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರಿ ಬೆಳವಣಿಗೆಗಳು ನಡೆಯುವುದು ಖಚಿತ. ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಹೋರಾಟ ದೇಶವನ್ನೇ ಇತ್ತ ಕಡೆಗೆ ತಿರುಗುವಂತೆ ಮಾಡಿದೆ. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹೊಸದೇನೂ ಅಲ್ಲ. ಯಾವ ಸರಕಾರಗಳೂ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಲೋಕಾಯುಕ್ತರಿಗೆ ಅಕ್ರಮ ಗಣಿಗಾರಿಕೆ ಹಗರಣವನ್ನು ವಹಿಸಲಾಗಿದೆ.
ಆದರೆ, ಈಗಾಗಲೇ ಲೋಕಾಯುಕ್ತರು ನೀಡಿರುವ ವರದಿಯ ಬಗ್ಗೆ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಸ್ವತಂತ್ರ ಸಂಸ್ಥೆಯಾಗಿರುವ ಸಿಬಿಐಗೆ ಹಗರಣವನ್ನು ವಹಿಸಬೇಕು ಎಂದು ಕಾಂಗ್ರೆಸ್ಸಿಗರ ಒತ್ತಾಯ ನಿಜ ಎನಿಸಿದರೂ, ಸಿಬಿಐ ಕೇಂದ್ರ ಸರಕಾರದ ಸುಪರ್ದಿಯಲ್ಲಿದೆ. ಸೋನಿಯಾ ಗಾಂಧಿ ಕೈಯಾಡಿಸುವ ಸಾಧ್ಯತೆ, ಇದೆ ಹೀಗಾಗಿ ಸಿಬಿಐ ಬೇಡವೇಬೇಡ ಎನ್ನುತ್ತೆ ದಿಲ್ಲಿ ಬಿಜೆಪಿ. ರೆಡ್ಡಿ ಬಿಡುಗಡೆ ಮಾಡಿದ ವರದಿಯಲ್ಲಿ ಬಳ್ಳಾರಿಯ ಅನೇಕ ಹಿರಿಯ ಕಾಂಗ್ರೆಸ್ಸಿಗರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿದ್ದಾರೆ. ಹೀಗಾದರೂ ಸಿಬಿಐ ತನಿಖೆ ನಡೆಸಬೇಕು ಎಂಬ ಪಟ್ಟಿನಿಂದ ಕೈ ಹಿಂದೆ ಸರಿಯದಿರುವುದು ವಿಶೇಷವಾಗಿದೆ.
ಹಾಗಂತ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ರೆಡ್ಡಿಗಳ ಬಣ, ಯಡ್ಡಿ ಬಣ ಇಂದಿಗೂ ಚಾಲ್ತಿಯಲ್ಲಿವೆ. ಈವರೆಗೂ ರೆಡ್ಡಿಗಳ ಬಣದಲ್ಲಿ ಗುರುತಿಸಿಕೊಂಡಿದ್ದ ಅಬಕಾರಿ ಮಂತ್ರಿ ಎಂ ಪಿ ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಮತ್ತಿತರರು ಯಡ್ಡಿ ಬಣಕ್ಕೆ ಜೈಜೈ ಎಂದಿದ್ದಾರೆ. ಮುಖ್ಯಮಂತ್ರಿಗಳ ಪಾಳೆಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಂಸದ ಧನಂಜಯಕುಮಾರ ರೆಡ್ಡಿ ಬಳಗಕ್ಕೆ ಪ್ರವೇಶ ಪಡೆದಿದ್ದಾರೆ.
ಮುಂದಿನ ತಿಂಗಳು ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದರಿಂದ ರೇಣುಕಾ ಮತ್ತು ಬೇಳೂರು ಯಡ್ಡಿ ಬಣಕ್ಕೆ ಜಿಗಿಯುವುದರ ಜೊತೆಗೆ ನಿಷ್ಠೆಯನ್ನು ಚೇಂಜ್ ಮಾಡಿದ್ದಾರೆ. ಅತ್ಯಾಚಾರ ಆರೋಪಕ್ಕೊಳಗಾಗಿ ಮಂತ್ರಿಗಿರಿ ಕಳೆದುಕೊಂಡಿರುವ ಹಾಲಪ್ಪ ಅವರ ಸ್ಥಾನಕ್ಕೆ ಬೇಳೂರು ಕಣ್ಣಾಕಿರುವುದು ಹೊಸದೇನಲ್ಲ. ಈಡಿಗ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವ ಒತ್ತಾಯ ಶುರುವಾಗಿದೆ. ಮೊನ್ನೆ ತಾಜ್ ವೆಸ್ಟಂಡ್ ನಲ್ಲಿ ಜನಾರ್ದನರೆಡ್ಡಿ-ಧನಂಜಯಕುಮಾರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ್ದು, ರೆಡ್ಡಿಯನ್ನು ಧನಂಜಯಕುಮಾರ ಬಲವಾಗಿ ಸಮರ್ಥಿಸಿಕೊಂಡು, ಸಿಬಿಐ ತನಿಖೆಯನ್ನು ಸಾರಾಸಗಟಾಗಿ ತಳ್ಳಹಾಕಿದ್ದು ಹೊಸ ಬೆಳವಣಿಗೆಯೇ.
ಈ ಮಧ್ಯೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಇನ್ನೊಂದು ಬಲವಾದ ಆರೋಪವಿದೆ. ಅಕ್ರಮ ಗಣಿಗಾರಿಕೆಗೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗುವುದರಲ್ಲಿ ಯಡಿಯೂರಪ್ಪ ಅವರ ಪಾತ್ರವಿದೆ ಎನ್ನುವ ಮಾತು ಇದೆ. ಇದು ರೆಡ್ಡಿಗಳು ಸಿಎಂ ವಿರುದ್ಧ ಗರಂ ಆಗಲು ಕಾರಣವಾಗಿದೆ. ವಿಪರೀತ ಜಾತಿ ರಾಜಕೀಯ ಮಾಡುತ್ತಿರುವ ಯಡಿಯೂರಪ್ಪ ಅವರ ವರ್ತನೆ ಹಾಗೂ ಮುಖ್ಯವಾಗಿ ಸೋಮಣ್ಣ ಅವರಿಗೆ ನೀಡುತ್ತಿರುವ ಪ್ರಾಶಸ್ತ್ಯ ಒಕ್ಕಲಿಗ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ತಿಂಗಳು ಸಂಪುಟ ವಿಸ್ತರಣೆ ವೇಳೆಗೆ ಬಿಜೆಪಿಯಲ್ಲಿ ಬಿರುಗಾಳಿ ಎಳುವ ಲಕ್ಷಣಗಳೂ ಇವೆ.
ಒಟ್ಟಿನಲ್ಲಿ ರಾಜಧಾನಿಯಿಂದ ಕಾಂಗ್ರೆಸ್ ಆರಂಭಿಸಿರುವ ಪಾದಯಾತ್ರೆಯಂತೂ ಬಿಜೆಪಿ ಸರಕಾರವನ್ನು ಕಿತ್ತೊಗೆಯುತ್ತೇವೆ ಎಂಬ ಅಬ್ಬರದಿಂದಲೇ ಶುರುವಾಗಿದೆ. ಪಾದಯಾತ್ರೆ ಯಶಸ್ವಿಯಾದರೆ, ಮೂರು ಪ್ರಮುಖ ಘಟನೆಗಳು ಸಂಭವಿಸುವ ಲಕ್ಷಣಗಳಿವೆ. ಒಂದು ಬಳ್ಳಾರಿ ಮೂವರು ಸಚಿವರಲ್ಲಿ ಬಾಸ್ ಎನಿಸಿರುವ ಜನಾರ್ದನರೆಡ್ಡಿಯ ರಾಜೀನಾಮೆ. ಕಾನೂನು ಸುವ್ಯವಸ್ಥೆ ನೆಪವೊಡ್ಡಿ ರಾಜ್ಯಪಾಲರು ತಮ್ಮ ಅಧಿಕಾರ ಬಳಸಿ ಸರಕಾರ ವಜಾಗೊಳಿಸುವುದು. ಕಾದು ಕುಳಿತಿರುವ ಮಾಜಿ ಪ್ರಧಾನಿ 50 ವರ್ಷದ ಸುದೀರ್ಘ ರಾಜಕೀಯ ಅನುಭವ ಬಳಸಿ ಕರಾಮತ್ತು ನಡೆಸಬಹುದು.











Click it and Unblock the Notifications